ಕೊಣನೂರು: ಪಂದ್ಯಾವಳಿಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಎಲ್ಲಾ ತಂಡಗಳೂ ಸಹ ಉತ್ತಮ ಪ್ರದರ್ಶನ ತೋರುವ ಮೂಲಕ ಈ ಭಾಗದ ಜನತೆಯ ಮನಸ್ಸನ್ನು ಗೆಲ್ಲಿ. ನಿಮ್ಮಲ್ಲಿರುವ ಪ್ರತಿಭೆಯನ್ನು ನೀವು ಈ ಮೈದಾನದಲ್ಲಿ ಸಾಬೀತು ಪಡಿಸಿ. ಇದರಿಂದ ನಮ್ಮ ಗ್ರಾಮೀಣ ಭಾಗದ ಜನರು ಕ್ರೀಡೆಗಳಲ್ಲಿ ಮುಂದೆ ಬರಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ಎ. ಮಂಜು ತಿಳಿಸಿದರು.
ಸಮೀಪದ ಹುಲಿಕಲ್ ಗ್ರಾಮದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಮೂರನೇ ವರ್ಷದ ಕೆಂಪೇಗೌಡ ಕಪ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿದರು.
ಕ್ರೀಡೆಗಳನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ ಪ್ರತೀ ದಿನ ಸತತ ಅಭ್ಯಾಸ ನಡೆಸುತ್ತಾ ಎಲ್ಲಾ ಕಡೆ ನಡೆಯುವ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಜೀವನದಲ್ಲಿ ದೇಶದ ಉತ್ತಮ ಕ್ರೀಡಾಪಟುಗಳಾಗಿ ತಾಲೂಕಿಗೆ ಹಾಗೂ ಗ್ರಾಮಕ್ಕೆ ಹೆಮ್ಮೆ ತರುವಂತಾಗಬೇಕು ಎಂದರು. ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿ ಇಂದಿನ ಯುವಕರು ಮೊಬೈಲ್‌ಗಳಲ್ಲಿ ಹೆಚ್ಚು ಆಟಗಳನ್ನು ಆಡದೇ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯ ನೀಡುವ ಗ್ರಾಮೀಣ ಕ್ರೀಡೆಗಳ ಬಗ್ಗೆ ಯುವಕರು ಹೆಚ್ಚು ಹೆಚ್ಚು ಆಸಕ್ತಿ ವಹಿಸಬೇಕು.
ಗ್ರಾಮಸ್ಥರೂ ಸಹ ಈ ರೀತಿಯ ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಆಯೋಜಿಸುವ ಮೂಲಕ ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು. ನಾನು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಸಂಚರಿಸಿ ಹಲವಾರು ಅಭಿವೃದ್ದಿ ಕಾರ್ಯಗಳಿಗೆ ಅನುದಾನಗಳನ್ನು ನೀಡಿದ್ದು, ಹುಲಿಕಲ್ ಗ್ರಾಮಕ್ಕೆ ವಿಶೇಷವಾದ ಅನುದಾನಗಳನ್ನು ನೀಡಿದ್ದೇನೆ ಹಾಗೆಯೇ ಮಲ್ಲಿಪಟ್ಟಣ ಹೋಬಳಿಯ ಹಲವೆಡೆ ದೇವಾಲಯ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಹೀಗೆ ಅರಕಲಗೂಡು ತಾಲೂಕಿಗೆ ಶಾಲಾ ಕಟ್ಟಡ ದುರಸ್ಥಿಗೆ, ರಸ್ತೆಗಳು, ಕಲ್ಯಾಣ ಮಂಟಪ ದುರಸ್ಥಿಗೆ, ಚರಂಡಿ, ಸಿಮೆಂಟ್ ರಸ್ತೆ ಹೀಗೆ ಸಾಕಷ್ಟು ಅನುದಾನಗಳನ್ನು ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಸುರೇಶ ಸಿಂಗನಕುಪ್ಪೆ, ಮುಖಂಡರಾದ ಎಸ್.ಸಿ.ಚೌಡೇಗೌಡ, ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸದಸ್ಯರುಗಳು, ಮಲ್ಲಿಕಣ್ಣ, ದಿವಾಕರ ಗೌಡ್ರು, ಬೆಟ್ಟದಹಳ್ಳಿ ಮಹೇಶ, ಮುಖಂಡರು, ಗಣ್ಯರು ಮುಂತಾದವರು ಉಪಸ್ಥಿತರಿದ್ದರು.