ಬೇಲೂರು: ಬೇಲೂರು ದೇಶಭಕ್ತರ ಬಳಗದಿಂದ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾದ್ಯಮದಲ್ಲಿ ಅತ್ಯುನ್ನತ ಅಂಕ ಪಡೆದ ಗಬ್ಬಲಗೂಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಸಿ.ಎಂ ಅವರನ್ನು ದೇಶಭಕ್ತರ ಬಳಗದ ಅಧ್ಯಕ್ಷ ಡಾ|ಸಂತೋಷ್ ಕುಮಾರ್ ನೇತೃತ್ವದಲ್ಲಿ ಅತ್ಮೀಯವಾಗಿ ಅಭಿನಂದನೆ ಸಲ್ಲಿಸಿದರು.
ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಬಹುತೇಕ ಪೋಷಕರು ಆಂಗ್ಲ ಮಾದ್ಯಮದ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದೆ. ಇದರಿಂದ ನಮ್ಮ ನೆಲದ ಮೂಲ ಮಾತೃ ಭಾಷೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇಂತಹ ದಿನದಲ್ಲಿ ಕನ್ನಡ ಮಾದ್ಯಮ ಸರ್ಕಾರಿ ಪ್ರೌಢಶಾಲೆಗಳು ಕೂಡ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 100 ಕ್ಕೆ 100 ಫಲಿತಾಂಶ ಪಡೆದಿರುವುದು ನಿಜಕ್ಕೂ ಅಗಮ್ಯವಾಗಿದೆ. ಬೇಲೂರು ತಾಲೂಕಿನ ಸುಮಾರು 8 ಸರ್ಕಾರಿ ಶಾಲೆಗಳು ಕೂಡ ಶೇಕಡ 100 ಫಲಿತಾಂಶ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ವಿಶೇಷವಾಗಿ ತಾಲೂಕಿನ ಗಬ್ಬಲಗೂಡು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಿ.ಎಂ ಅಮೂಲ್ಯ ಯಾವುದೇ ಟ್ಯೂಷನ್ ಇಲ್ಲದೆ ಶಿಕ್ಷಕರು ತಿಳಿಸಿದ ಪಾಠವನ್ನು ಅರ್ಥ ಮಾಡಿಕೊಂಡು 10 ನೇ ತರಗತಿಯಲ್ಲಿ 625 ಕ್ಕೆ 600 ಅಂಕವನ್ನು ಪಡೆದು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಅವರ ಪೋಷಕರು ಕೂಡ ಅಂತಹ ವಿದ್ಯಾವಂತರಲ್ಲ. ಆದರೂ ತಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ಉತ್ತಮ ಶಿಕ್ಷಣ ನೀಡಲು ಮುಂದಾಗಿರುವುದು ಉತ್ತಮ ವಿಷಯವಾಗಿದೆ ಎಂದ ಅವರು ದೇಶಭಕ್ತರ ಬಳಗ ಸದ್ದು ಇಲ್ಲದೆ ಕಳೆದ ಮೂರು ವರ್ಷಗಳಿಂದ ಸಮಾಜದಲ್ಲಿ ಜನಪರ ಮತ್ತು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ವಿಶೇಷವಾಗಿ ಎಲೆಮರೆಯ ಕಾಯಿಯಂತೆ ಇರುವ ಪ್ರತಿಭೆಗಳಿಗೆ ಪುರಸ್ಕಾರ ನೀಡುತ್ತಾ ಬಂದಿದೆ.
ಪ್ರತಿ ವರ್ಷ ಬರುವ ರಾಷ್ಟ್ರದ ಭಕ್ತರ ದಿನಾಚರಣೆ ದಿನ ದೇಶಭಕ್ತರನ್ನು ಗೌರವಿಸುವ ಕೆಲಸ ಮಾಡಲಾಗಿದೆ. ಕೃಷಿ ದಿನ ಪ್ರಗತಿ ಪರ ಕೃಷಿಕರಿಗೆ ಸನ್ಮಾನ ಹಾಗೂ ಸಮಾಜದ ಎಲ್ಲಾ ವರ್ಗಗಳನ್ನು ಗುರುತಿಸಿ ಅವರಿಗೆ ಗೌರವಾಭಿಮಾನ ನೀಡುವ ಕೆಲಸಕ್ಕೆ ದೇಶಭಕ್ತರ ಬಳಗ ಮುಂದಾಗಿದೆ. ಇಂದು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅಮೂಲ್ಯ ಅವಳನ್ನು ಅಭಿನಂದನೆ ಸಲ್ಲಿಸಿದ್ದು ನಿಜಕ್ಕೂ ಸಂತೋಷವಾಗಿದೆ. ಮುಂದಿನ ದಿನದಲ್ಲಿ ಈಕೆ ಉತ್ತಮ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಯಾಗಲಿ ಎಂದು ಹಾರೈಸಿದರು.
ದೇಶಭಕ್ತರ ಬಳಗದ ಕಾರ್ಯದರ್ಶಿ ಮಲ್ಲಿಕಾರ್ಜುನ ಮೆಡಿಕಲ್ಸ್ ಮಹೇಶ್, ಪದಾಧಿಕಾರಿಗಳಾದ ರಾಜೇಶ್ವರಿ, ಸಾಹಿತಿಗಳಾದ ಮಾರುತಿ ದೊಡ್ಡಕೊಡಿಹಳ್ಳಿ, ನಿರಂಜನ್, ಸೋಂಪುರ ಪ್ರಕಾಶ್, ಮಾಧು ಮಾಲತಿ, ಅನ್ನಪೂರ್ಣ, ವಿದ್ಯಾರ್ಥಿನಿ ಪೋಷಕರಾದ ನೇತ್ರ ಮತ್ತು ಮಂಜುನಾಥ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.