ಹಾಸನ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಕರಗುಂದ ಗ್ರಾಮ ಪಂಚಾಯಿತಿಯಲ್ಲಿರುವ ದೊಡ್ಡಕೆರೆಯನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ದಿಪಡಿಸಲಾಗಿದೆ.
ಸುಮಾರು ೧೫೦ ವರ್ಷಗಳ ಇತಿಹಾಸವನ್ನು ಹೊಂದಿರುವ ಕರಗುಂದ ಕೆರೆಯು ೨೫ ಎಕರೆಗಳಷ್ಟು ವಿಸ್ತಾರವನ್ನು ಹೊಂದಿದೆ. ಸುಮಾರು ೧೦ ವರ್ಷಗಳಿಂದ ಈಚೆಗೆ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕರಗುಂದ ಕೆರೆಯಲ್ಲಿ ನೀರು ಸಂಗ್ರಹಣೆ ಕಡಿಮೆಯಾಗಿದ್ದು, ಕೆರೆಯ ತುಂಬೆಲ್ಲ ಮುಳ್ಳು ಗಿಡಗಳು ಬೆಳೆದಿದ್ದು, ಕೆರೆಗೆ ಯಾವುದೇ ಅಭಿವೃದ್ದಿ ಇಲ್ಲದಂತಾಗಿ ಖಾಲಿ ಕೆರೆಯಾಗಿತ್ತು.
೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಮಾನ್ಯ ಪ್ರಧಾನ ಮಂತ್ರಿಗಳ ಅಮೃತ ಹಸ್ತದಿಂದ ಅಮೃತ ಸರೋವರ ಯೋಜನೆಯಡಿ ಕೆರೆಗಳನ್ನು ಅಭಿವೃದ್ದಿಪಡಿಸಲು ಚಾಲನೆ ನೀಡಲಾಗಿದ್ದು, ಅದರಂತೆ ಕರಗುಂದ ಗ್ರಾಮದ ಕೆರೆಯನ್ನು ಅಮೃತ ಸರೋವರ ಯೋಜನೆಯಡಿ ಸುಮಾರು ೩೦ ಲಕ್ಷ ರೂ. ಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗಿದೆ.
ಕೆರೆಯಲ್ಲಿ ಬೆಳೆದಿರುವ ಮುಳ್ಳುಗಿಡಗಳನ್ನೆಲ್ಲಾ ತೆಗೆದು ಕೆರೆಗೆ ನೀರು ಹರಿದು ಬರುವ ನಾಲೆಗಳನ್ನು ಅಭಿವೃದ್ದಿಪಡಿಸಿ, ಕೆರೆಯ ಏರಿಯ ಸುತ್ತಲೂ ರಿವೀಟ್‌ಮೆಂಟ್ ನಿರ್ಮಿಸಲಾಗಿದೆ. ಕೆರೆಗೆ ವ್ಯೂ ಪಾಯಿಂಟ್ ಕೂಡ ನಿರ್ಮಾಣ ಮಾಡಲಾಗಿದ್ದು, ಕೆರೆಯ ಸೌಂದರ್ಯತೆಯನ್ನು ಹೆಚ್ಚಿಸಿದೆ. ಕಳೆದ ವರ್ಷ ಉತ್ತಮ ಮಳೆಯಾಗಿರುವುರಿಂದ ಕೆರೆಗೆ ನೀರು ಹರಿದು ಬಂದು ಕೆರೆ ತುಂಬಿರುವುದರಿಂದ ರೈತರಿಗೆ ಅನುಕೂಲವಾಗಿದೆ. ವರ್ಷಪೂರ್ತಿ ಕೆರೆಯಲ್ಲಿ ನೀರು ತುಂಬಿರುವುರಿಂದ ಕೊಳವೆ ಬಾವಿಗಳು ಮರುಪೂರಣವಾಗುವುದರ ಜೊತೆಗೆ ಅಂತರ್ಜಲ ಮಟ್ಟವೂ ಏರಿಕೆಯಾಗಿದೆ.