ಚನ್ನರಾಯಪಟ್ಟಣ: ಇಡೀ ವಿಶ್ವವೇ ಕರ್ನಾಟಕದತ್ತ ನೋಡುವಂತೆ ಮಾಡಿದ ಕಾಂತಾರ ಚಿತ್ರ ನಮ್ಮ ಸಂಸ್ಕೃತಿ, ದೈವಗಳ ಪರಂಪರೆಯನ್ನು ಸಾರುವಂತಿದ್ದು ಅದರಂತೆ ತಾಲೂಕಿನಲ್ಲಿ ದೈವಗಳ ಅದ್ದೂರಿ ಯಕ್ಷಗಾನ ಕಲಾ ಪ್ರದರ್ಶನ ನಡೆಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ತಿಳಿಸಿದರು.
ಅವರು ಪಟ್ಟಣದ 40 ಅಡಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದ ಎದುರು ಕಾರ್ಯಕ್ರಮದ ರಥಕ್ಕೆ ಚಾಲನೆ ನೀಡಿ ಮಾತನಾಡಿ ಇದೇ ಫೆ.12ರಂದು ಪಟ್ಟಣದ ನವೋದಯ ಶಾಲಾ ಆವರಣದಲ್ಲಿ ಸಂಜೆ 5.30ಕ್ಕೆ ಹೇಮವಾಣಿ ಪ್ರಕಾಶನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಾಸನ ಜಿಲ್ಲೆಯಲ್ಲೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕಾಂತಾರ ಶೈಲಿಯಂತಹ ಇನ್ನೊಂದು ವಿಶೇಷ ಅದ್ಧೂರಿ ಕಥಾನಕ ಪಂಜುರ್ಲಿ ಮತ್ತು ಗುಳಿಗ ದೈವಗಳ ಪ್ರವೇಶ ಇರುವ ಹಿರಿಯಡ್ಕ ಕ್ಷೇತ್ರ ಮಹಾತ್ಮೆ ಎಂಬ ಕನ್ನಡ ಯಕ್ಷಗಾನ ಕಲಾ ಪ್ರದರ್ಶನ ಕಾರ್ಯಕ್ರಮ ಜರುಗಲಿದ್ದು ಸದ್ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಶ್ರದ್ಧಾ ಭಕ್ತಿಯಿಂದ ಕ್ರಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿ.ಮಹೇಶ ಮಾತನಾಡಿ, ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ ನಡೆಯುತ್ತಿರುವುದು ಇದೇ ಮೊದಲು ಇಂತಹ ಕಾರ್ಯಕ್ರಮವನ್ನು ಹೇಮವಾಣಿ ಸಂಘದ ವತಿಯಿಂದ ನಡೆಸುತ್ತಿರುವುದು ಸಂತಸದ ವಿಚಾರ. ಆದ್ದರಿಂದ ಜನತೆ ಮರೆಯದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲೆಯನ್ನು ಪ್ರೋತ್ಸಾಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಪುಟ್ಟಣ್ಣ ಗೋಕಾಕ್, ತಾಲೂಕು ರೈತ ಸಂಘದ ಅಧ್ಯಕ್ಷರಾದ ಸಿ. ಜಿ. ರವಿ, ಮೀಸೆ ಮಂಜಣ್ಣ, ಕುಮಾರ, ಶಂಕರಚಾರ್, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನಾಗರಾಜ, ವಿನೋದ ಪೂಜಾರಿ, ಜಗದೀಶ, ಧರಣೇಶ, ಕರವೇ ಪ್ರಧಾನ ಕಾರ್ಯದರ್ಶಿ ರವಿ ಮಡಿವಾಳ, ನಗರ ಉಪಾಧ್ಯಕ್ಷ ವಿಶ್ವಾಸ್‌ಗೌಡ ಮತ್ತಿತರಿದ್ದರು.