ಹಾಸನ: ಜಿಲ್ಲೆಯ ವೈದ್ಯಕೀಯ ಲೋಕದಲ್ಲಿಯೇ ಪ್ರಥಮ ಪ್ರಯತ್ನವಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾಡಿದ ಹೃದಯ ಕವಾಟ ಜೋಡಣೆ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಮಂಗಳ ಆಸ್ಪತ್ರೆಯ ಸಿಇಓ ಡಾ. ಎಂ.ಪಿ ಅಶೋಕ್ ಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಆಸ್ಪತ್ರೆಯಲ್ಲಿ ಈ ರೀತಿಯ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಿಗೊಳಿಸಲಾಗಿದ್ದು, ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥರಾದ ಪ್ರಧಾನ ಹೃದಯ ಶಸ್ತ್ರಚಿಕಿತ್ಸಕ ಡಾ. ಆಶಿತಾ ಶ್ರೀಧರ ಹಾಗೂ ಅರವಳಿಕೆ ತಜ್ಞರಾದ ಡಾ. ಸೀಮಾ ಭಟ್ ಹಾಗೂ ಸಿಬ್ಬಂದಿಗಳು ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
ಈ ವೇಳೆ ಮಾತನಾಡಿದ ಡಾ. ಆಶಿತಾ ಶ್ರೀಧರ್ ಹಾಸನ ಮೂಲದ 78 ವರ್ಷದ ವೃದ್ಧರಿಗೆ ಹಲವು ದಿನದಿಂದ ಹೃದಯದಲ್ಲಿ ರಕ್ತದ ಚಲನೆ ತೀವ್ರ ಕಡಿಮೆ ಯಾಗಿತ್ತು. ದಣಿವು ಉಸಿರಾಟದಿಂದ ಎದೆ ನೋವು, ತಲೆಸುತ್ತು ಕಾಣಿಸಿಕೊಳ್ಳುತ್ತಿತ್ತು, ನಂತರ ಹೃದಯಾಘಾತಕ್ಕೆ ಒಳಗಾದರು. ಅವರ ಕವಾಟದಲ್ಲಿ ಕ್ಯಾಲ್ಸಿಯಂ ಅಂಶ ಸೇರಿಕೊಂಡು ಕವಾಟ ಬಹಳ ಚಿಕ್ಕದಾಗಿ ಮುಂದಿನ ಎರಡು ವರ್ಷ ಅವಧಿ ಕೂಡ ಜೀವಿಸಲು ಕಷ್ಟವಾಗಿತ್ತು. ನಂತರ ನಮ್ಮ ಆಸ್ಪತ್ರೆಗೆ ದಾಖಲಾದಾಗ ಒಂದು ತಿಂಗಳ ಸತತ ಹಾಗೂ ತೀವ್ರ ವೈದ್ಯಕೀಯ ಪರಿಶೀಲನೆ ಒಳಪಡಿಸಿ ನೂತನ ಬಗೆಯ ಚಿಕಿತ್ಸೆ ಬಗ್ಗೆ ತಿಳಿಸಿ, ಅವರ ಒಪ್ಪಿಗೆಯನ್ನು ಪಡೆದು ಯಶಸ್ವಿಯಾಗಿ ಈ ವಿಧಾನದ ಚಿಕಿತ್ಸೆ ಪೂರ್ಣಗೊಳಿಸಲಾಯಿತು ಎಂದರು.
ಟಿಎವಿಐ ವಿಧಾನದಲ್ಲಿ ಬೇರೆ ಶಸ್ತ್ರಚಿಕಿತ್ಸೆಯೆಲ್ಲ ಆಗುವಂತೆ ತೆರೆದ ಗಾಯಗಳಾಗಲಿ, ಹೊಲಿಗೆಗಳಾಗಲಿ ಈ ಚಿಕಿತ್ಸೆಗೆ ಬೇಕಾಗಿರುವುದಿಲ್ಲ ಸ್ಥಳೀಯ ಅರವಳಿಕೆ ಕೊಟ್ಟು ಕಾಲಿನ ರಕ್ತನಾಳದಿಂದ ಹೊಸ ಕವಾಟವನ್ನು ಅಳವಡಿಸಲಾಗುತ್ತದೆ. ಈ ವಿಧಾನದಲ್ಲಿ ರೋಗಿ ಕೇವಲ ಮೂರು ಗಂಟೆಗಳ ನಂತರ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಬಹುದು ಹಾಗೂ 48 ಗಂಟೆಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಬಹುದಾಗಿದೆ. ಇದೀಗ ಚಿಕಿತ್ಸೆ ಪಡೆದವರು ಎರಡು ದಿನಗಳಲ್ಲಿ ಮನೆಗೆ ತೆರಳಿ ತಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದಾರೆ ಎಂದು ಹೇಳಿದರು.