ಕೊಣನೂರು: ರಾಮನಾಥಪುರ ವಹ್ನಿ ಪುಷ್ಕರಣಿಗೆ ಫ್ರೆಂಡ್ಸ್ ಆಫ್ ವೈಲ್ಡ್‌ಲೈಫ್ ಎಂಬ ಬೆಂಗಳೂರಿನ ಎನ್‌ಜಿಒ ರವರು ಹಾಸನ ಹಾಗೂ ಹಾರಂಗಿ ಮೀನುಗಾರಿಕಾ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮೀನುಗಳ ಬಗ್ಗೆ ಅಧ್ಯಯನ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮೀನುಗಾರಿಗೆ ಇಲಾಖೆಯ ಉಪನಿರ್ದೇಶಕ ಎಂ.ಎಚ್ ನಂಜುಂಡಪ್ಪ ಮಾತನಾಡಿ ಮೀನುಗಳ ಸಂರಕ್ಷಣೆಗೆ ಎಲ್ಲೂ ಈ ಸಹ ಈ ತರಹದ ಕಾರ್‍ಯ ಮಾಡಿಲ್ಲ.
ಪ್ರಪ್ರಥಮವಾಗಿ ರಾಮನಾಥಪುರದಲ್ಲಿ ಹಮ್ಮಿಕೊಂಡಿದ್ದು ಇಲ್ಲಿಂದಲೇ ಇದನ್ನು ಯಶಸ್ವಿ ಗೊಳಿಸಿಕೊಡಬೇಕು. ಮೀನುಗಳನ್ನು ಕಾಳಜಿ ಮಾಡಿ ನೋಡಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಅವುಗಳ ಫೋಟೋಗಳನ್ನು ಮಾತ್ರ ತೋರಿಸಬೇಕಾಗುತ್ತದೆ. ಹೀಗಾಗಿ ಮೀನುಗಳ ಸಂರಕ್ಷಣೆಗೆ ಸದಾಕಾಲ ಎಲ್ಲರೂ ಸಹಕಾರ ನೀಡಬೇಕು ಎಂದರು.
ಹಾರಂಗಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ಮಾತನಾಡಿ ನಮ್ಮ ಅತಿಯಾದ ಆಸೆಯಿಂದ ಪರಿಸರವನ್ನು ಹಾಳು ಮಾಡುವುದಲ್ಲದೇ ಮೀನುಗಳ ಸಂತತಿಯನ್ನು ಕಡಿಮೆ ಮಾಡಿದ್ದೇವೆ. ಇದು ಮುಂದೆ ಹೀಗಾಗದೇ ಇಲ್ಲಿನ ಮೀನುಗಳಿಗೆ ಉತ್ತಮ ಪೋಷಕಾಂಶ ಯುಕ್ತ ಆಹಾರವನ್ನು ಕೊಡುವುದರ ಮೂಲಕ ಮೀನುಗಳ ಸಂತತಿಗೆ ಕಾರಣೀಕರ್ತರಾಗಬೇಕು ಎಂದರು.
ಫ್ರೆಂಡ್ಸ್ ಆಫ್ ವೈಲ್ಡ್ ಲೈಫ್ ನ ಮಂಜುನಾಥ್ ಮಾತನಾಡಿ ನಮ್ಮ ಸಂಸ್ಥೆಯು ಭೂಮಿಯ ಮೇಲೆ ವಾಸಿಸುತ್ತಿರುವ ಪ್ರಾಣಿ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅಲ್ಲಿಗೆ ಬೇಕಾಗುವ ಸೌಕರ್ಯಗಳನ್ನು ಒದಗಿಸಿಕೊಡುತ್ತಿದ್ದೇವೆ. ಈಗ ಜಲಚರ ಪ್ರಾಣಿಗಳ ಬಗ್ಗೆಯೂ ತಿಳಿದುಕೊಂಡು ಅವುಗಳ ಸಂತಾನಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಇದೇ ಮೊದಲ ಬಾರಿಗೆ ಇಲ್ಲಿನ ಪುಷ್ಕರಣಿಗೆ ಆಗಮಿಸಿದ್ದು ಇಲ್ಲಿಯ ಪುಷ್ಕರಣಿಯಲ್ಲಿನ ವಿವಿಧ ಜಾತಿಯ ಮೀನುಗಳಿಗೆ ಪ್ರವಾಸಿಗರು ಕಡಲೇ ಕಾಯಿ, ಪುರಿ ಮುಂತಾದವುಗಳನ್ನು ಹಾಕುತ್ತಿದ್ದು ಇದರಿಂದ ಮೀನುಗಳ ಸಂತತಿಗೆ ಧಕ್ಕೆಯಾಗುವುದರಿಂದ ನಮ್ಮ ಸಂಸ್ಥೆಯ ವತಿಯಿಂದ ರಿಚ್ ಪ್ರೋಟೀನ್ ಯುಕ್ತ ಆಹಾರವನ್ನು ವಿತರಿಸಲು ಬಂದಿದ್ದು ಕಡಲೇಕಾಯಿ, ಪುರಿ ಮುಂತಾದವುಗಳನ್ನು ಮಾರುವರು ಇದನ್ನು ಕೊಂಡು ಪ್ರವಾಸಿಗರಿಗೆ ನೀಡುವುದರಿಂದ ಮೀನುಗಳ ಸಂತತಿಯು ಹೆಚ್ಚಾಗಿ ಪುಷ್ಕರಣಿಯಲ್ಲಿ ಮೀನುಗಳ ಸಂಖ್ಯೆ ಜಾಸ್ತಿಯಾಗುತ್ತದೆ ಎಂದರು. ಕಾವೇರಿ ನದಿ ಸ್ವಚ್ಚತಾ ಆಂದೋಲನಾ ಸಮಿತಿ ಸದಸ್ಯರುಗಳಾದ ಸಿದ್ದಯ್ಯ, ಕಾಳಬೋಯಿ, ಕೇಶವ ಮುಂತಾದವರು ನದಿಯ ಬಳಿಗೆ ಒಬ್ಬರು ಕಾವಲುಗಾರರನ್ನು ನೇಮಿಸಿಕೊಡಬೇಕು, ಹೈಮಾಸ್ಟ್ ದೀಪ, ಸಿಸಿ ಟಿವಿ ಅಳವಡಿಸಿ ಕೊಟ್ಟು ಮೀನುಗಳ ಕಳ್ಳತನ ನಿಲ್ಲುವಂತೆ ಮಾಡಬೇಕು ಎಂದು ಇಲಾಖೆಯವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾರಂಗಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್, ಅರಕಲಗೂಡು ಸಹಾಯಕ ನಿರ್ದೇಶಕ ಮಹದೇವ್, ಫ್ರೆಂಡ್ಸ್ ಆಫ್ ವೈಲ್ಡ್‌ಲೈಫ್ ನ ಆಡಳಿತ ಕಾರ್ಯದರ್ಶಿ ಚಂದನ, ನಿರ್ವಹಣಾ ಕಾರ್ಯದರ್ಶಿ ಮಂಜುನಾಥ್, ಆಡಳಿತ ಮಂಡಳಿಯ ಆದಿಶೇಷ, ಶಿಲ್ಪ ಹಾಗೂ ಸದಸ್ಯರುಗಳು ಇದ್ದರು.