ಹಾಸನ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾ. 26ರಂದು “ಡಾ. ಎಸ್.ಎಲ್. ಭೈರಪ್ಪ ಕಲೆ ಮತ್ತು ಸಂಸ್ಕೃತಿ ಅಭಿವೃದ್ಧಿ ಕೇಂದ್ರದ” ಶಂಕು ಸ್ಥಾಪನೆ ಸಮಾರಂಭ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಂ.ಡಿ ಸುದರ್ಶನ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ ಗ್ರಾಮದಲ್ಲಿ ಶಂಕುಸ್ಥಾಪನಾ ಸಮಾರಂಭವು ಬೆಳೆಗ್ಗೆ 9.30ಕ್ಕೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ. ಕೇಂದ್ರದ ಶಂಕು ಸ್ಥಾಪನೆಯನ್ನು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ನೆರವೇರಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್ ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್. ಡಿ ರೇವಣ್ಣ, ಹೆಚ್. ಕೆ ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಎಸ್. ಎಲ್. ಭೈರಪ್ಪ ಅವರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ಸಿಗೊಳಿಸಬೇಕು ಎಂದು ಮನವಿ ಮಾಡಿದರು. ಈಗಾಗಲೇ ಡಾ. ಎಸ್.ಎಲ್ ಭೈರಪ್ಪ ಕಲೆ ಮತ್ತು ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಸರ್ಕಾ ರ 5 ಕೋಟಿ ಘೋಷಣೆ ಮಾಡಿದ್ದು, ಇದೀಗ ಒಂದು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ ಎಂದರು.
ಗೌರಮ್ಮ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್ ಕೃಷ್ಣ ಪ್ರಸಾದ್ ಮಾತನಾಡಿ, ಎಸ್.ಎಲ್.ಬೈರಪ್ಪ ಅವರು ರಾಜ್ಯದಲ್ಲಿ ಅಲ್ಲದೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಅವರ ಕೃತಿಗಳು ಈಗಾಗಲೇ ಹಲವು ಭಾಷೆಗಳಲ್ಲಿ ಅನುವಾದಗೊಂಡಿದ್ದು, ರಷ್ಯ ಹಾಗೂ ಚೈನಾ ಭಾಷೆಯಲ್ಲಿಯೂ ಪ್ರಕಟಗೊಂಡಿದೆ. 90 ವರ್ಷ ವಯೋಮಾನದ ಭೈರಪ್ಪ ಅವರಿಗೆ ಗೌರವ ಸಲ್ಲಿಸಲು ಮತ್ತು ಸೇವೆಯನ್ನು ಗುರುತಿಸಿ ಸರ್ಕಾರ ಕೇಂದ್ರ ಸ್ಥಾಪನೆಗೆ 5 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಸಂತೆಶಿವರ ಗ್ರಾಮಕ್ಕೆ ಏತ ನೀರಾವರಿ ಯೋಜನೆ ಮೂಲಕ 25 ಕೋಟಿ ಅನುದಾನವನ್ನು ಸಹ ಬಿಡುಗಡೆ ಮಾಡಿದೆ ಎಂದರು.