ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ತರಬೇತಿ ಶಿಬಿರ ಜಿಲ್ಲಾ ಉತ್ಸವ ಹಾಗೂ ಸಮಾರೋಪ ಸಮಾರಂಭ ಮಾ. 5ರಂದು ಆಯೋಜಿಸಲಾಗಿದೆ ಎಂದು ತರಬೇತಿ ಶಿಬಿರದ ಜಿಲ್ಲಾ ಸಂಚಾಲಕ ಎಚ್. ಆರ್. ಜಯಶಂಕರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭವು ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಗೆ ಜರುಗಲಿದೆ. ಜಿಲ್ಲೆಯಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ಕಲಾಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ನೆರವೇರಿಸಲಿದ್ದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ.
ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲೆಯ ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವಿರಿಷ್ಠಾಧಿಕಾರಿ ಹಾಗೂ ನಗರಸಭೆ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಭಾಗವಹಿಸಲಿದ್ದಾರೆ.
ತರಬೇತಿ ಶಿಬಿರದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹಾಗೂ ಕನ್ನಡ ಲಲಿತ ಕಲಾ ಅಕಾಡೆಮಿ ಮಾಜಿ ಸದಸ್ಯ ಆತ್ಮಾನಂದ ಎಚ್. ಎ. ಆಗಮಿಸಲಿದ್ದಾರೆ ಎಂದರು. 2022-23ನೇ ಸಾಲಿನ ಆಯವ್ಯಯ ಘೋಷಣೆಯಂತೆ ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟಕಲೆಗಳನ್ನು ಮುನ್ನೆಲೆಗೆ ತರಲು ಸರಕಾರದಿಂದ ಶಿಬಿರಗಳನ್ನು ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿನ ರಂಗ ಕುಣಿತ, ತೊಗಲು ಗೊಂಬೆ, ಚಿಟ್ಟಿಮೇಳ, ತಂಬೂರಿ ಪದ ಮತ್ತು ಕೀಲು ಕುದರೆ ಸೇರಿದಂತೆ 5 ಕಲಾ ಪ್ರಕಾರಗಳನ್ನು ಆಯ್ದು ಕಳೆದ ಜನವರಿ 24ರಿಂದ ಫೆಬ್ರವರಿ 12ರವರೆಗೆ ಪ್ರತಿ ಕಲಾ ಪ್ರಕಾರಕ್ಕೆ ತಲಾ 10 ಶಿಬಿರಾರ್ಥಿಗಳಿಗೆ ಆಯಾ ಕಲಾ ಪ್ರಕಾರದಲ್ಲಿ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ತರಬೇತಿ ಶಿಬಿರದ ಜಿಲ್ಲಾ ಸಂಚಾಲಕ ಎಸ್. ಡಿ. ಚಂದ್ರು, ನರಸಿಂಹಯ್ಯ, ಸುನಿಲ್ ಇದ್ದರು.