ಅರಸೀಕೆರೆ: ನಾಟಕ ಚಲನಚಿತ್ರ ಸೇರಿದಂತೆ ಕಲೆ ಸಾಹಿತ್ಯಗಳು ಮನೋರಂಜನೆ ನೀಡಿದರೆ ಸಾಲದು ಸಮಾಜದ ಓರೆ ಕೋರೆಗಳನ್ನು ತಿದ್ದುವ ಪ್ರಕಾರಗಳಾಗಬೇಕೆಂದು ರಂಗಭೂಮಿ ಹಾಗೂ ಚಲನಚಿತ್ರ ರಂಗದ ಹಿರಿಯ ಕಲಾವಿದ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.
ಬೋರೆಹಳ್ಳಿ ವೆಂಕಟೇಶ ನೇತೃತ್ವದಲ್ಲಿ ಲೇಖನಿ ಪವರ್ ಬಳಗದ ವತಿಯಿಂದ ನಗರದ ವೆಂಕಟೇಶ್ವರ ಕಲಾಭವನದಲ್ಲಿ ಆಯೋಜಿಸಿದ್ದ “ಚೋರ ಚರಣದಾಸ” ನಾಟಕ ಪ್ರದರ್ಶನದ ಮುನ್ನ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಒಬ್ಬ ಕಲಾವಿದನಾಗಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರೆ ಸಾಲದು ಸಮಾಜಕ್ಕೆ ಪೂರಕವಾದ ಸಂದೇಶವನ್ನು ನೀಡಬೇಕು ಎಂಬ ಸಂಕಲ್ಪದೊಂದಿಗೆ ನಾನು ಸ್ಥಾಪಿಸಿದ ನಟನ ರಂಗಶಾಲೆಯಲ್ಲಿ ಪ್ರತಿಭಾವಂತ ಯುವ ಕಲಾವಿದರು ತಮ್ಮ ಮನೋಜ್ಞ ಅಭಿನಯದ ಮೂಲಕ ನಾಡಿನ ಜನತೆಯ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ ಸಾಮಾಜಿಕ ಕಳಕಳಿಯುಳ್ಳ ಸಂದೇಶವನ್ನು ಸಮಾಜಕ್ಕೆ ನೀಡುತ್ತಿರುವುದು ವೈಯಕ್ತಿಕವಾಗಿ ಸಂತಸಕ್ಕೆ ಕಾರಣವಾಗಿದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಬಾಣವರ ಅಶೋಕ್ ಮಾತನಾಡಿ, ವರ್ಣ ರಂಜಿತಾ ಚಲನಚಿತ್ರ ಹಾಗೂ ಕಿರುತೆರೆಯ ಮಾಧ್ಯಮಗಳು ಪ್ರಸ್ತುತ ದಿನಗಳಲ್ಲಿ ಜನತೆಯನ್ನ ತನ್ನತ್ತ ಆಕರ್ಷಿಸಿಕೊಳ್ಳುತ್ತಿರುವುದರಿಂದ ರಂಗಭೂಮಿ ಕಲೆಗಳಾದ ನಾಟಕ, ಜನಪದ, ಕಲಾ ಪ್ರಕಾರಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಇದರಿಂದಾಗಿ ನೈಜ ಕಲೆ ಕಳೆಗುಂದುವಂತಾಗಿರುವುದು ಕಳವಳದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ವೆಂಕಟೇಶ ಮತ್ತು ಅವರ ತಂಡದವರು ಪ್ರತಿ ವರ್ಷ ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿರುವುದು ಸಂತಸ ವಿಷಯ ಎಂದು ಶ್ಲಾಘಿಸಿದರು.
ಬೋರೆಹಳ್ಳಿ ವೆಂಕಟೇಶ ಮಾತನಾಡಿ, ನಾಟಕ ಮತ್ತು ಜನಪದ ಕಲೆಗಳು ನಮ್ಮ ಸಂಸ್ಕೃತಿಯ ಅಡಿಪಾಯವಿದ್ದಂತೆ ಈ ಕಲೆಗಳು ನಶಿಸಿ ಹೋದರೆ ನಮ್ಮ ಬದುಕಿನ ಮೌಲ್ಯವೇ ಅರ್ಥ ಕಳೆದುಕೊಳ್ಳುತ್ತದೆ ಅಳಿವಿನ ಅಂಚಿಗೆ ಬಂದು ನಿಂತಿರುವ ಜಾನಪದ ಕಲೆಗಳನ್ನು ಪೋಷಿಸುವ ಕೆಲಸ ಸರ್ಕಾರದಿಂದ ಮಾತ್ರವಲ್ಲ, ಜನಪರ ಸಂಘ ಸಂಸ್ಥೆಗಳು ಸಹ ಕೈ ಜೋಡಿಸುವ ಮೂಲಕ ಕಲೆ ಹಾಗೂ ಕಲಾವಿದರನ್ನು ಪೋಷಿಸುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಕರ್ನಾಟಕ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಅಂಜನ್ ರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಗಂಗಾಧರ, ಬಸುಲಿಂಗಪ್ಪ, ಕೆಎಂಪಿಎಚ್‌ಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ, ಮಾಜಿ ಅಧ್ಯಕ್ಷ ಕಳಕಟ್ಟೆ ಕುಮಾರ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಕಲಾವಿದ ಮಂಡ್ಯ ರಮೇಶ ನೇತೃತ್ವದಲ್ಲಿ ನಟನ ರಂಗಶಾಲೆಯ ಕಲಾವಿದರು ಪ್ರಸ್ತುತಪಡಿಸಿದ ಚೋರ ಚರಣದಾಸ ನಾಟಕ ನೋಡುಗರ ಕಣ್ಮನ ಸೆಳೆಯಿತು.