ಹಾಸನ: ನಗರದ ಸಂತ ಪೇಟೆಯ ಸಂತೆಯಲ್ಲಿ ರೈತರು ಸಾಕಲು ಬೇಡ ಎಂದು ಎಳೆಯ ಗಂಡು ಕರುಗಳನ್ನು ಬಿಟ್ಟು ಹೋಗಿದ್ದರು. ಆ ಮುದ್ದಾಗಿರುವ ಕರುಗಳು ಆಹಾರಕ್ಕಾಗಿ ಪ್ಲಾಸ್ಟಿಕ್, ಮಣ್ಣನ್ನು ತಿನ್ನುತ್ತಾ ಇದ್ದವು ಇದನ್ನು ಗಮನಿಸಿದ ಸಮಾಜ ಸೇವಕ ಪ್ರವೀಣಗೌಡ ಅವುಗಳನ್ನು ನಗರ ಸಭೆ ಆವರಣಕ್ಕೆ ಆಟೋದಲ್ಲಿ ಕರೆದೊಯ್ದು ರಕ್ಷಿಸಿದ್ದಾರೆ.
ಸಾಮಾನ್ಯ ಸಭೆ ನಡೆಯುತ್ತಿರುವಾಗಲೇ ಕರುಗಳನ್ನು ಆವರಣಕ್ಕೆ ಆಟೋದಲ್ಲಿ ತಂದಿದ್ದರಿಂದ ಅಧಿಕಾರಿಗಳು, ನಗರಸಭೆ ಜನಪ್ರತಿನಿಧಿಗಳು ಹಾಗೂ ಪ್ರವೀಣ್‌ಗೌಡ ನಡುವೆ ಕರುಗಳ ರಕ್ಷಣೆ ಮಾಡುವ ವಿಚಾರದಲ್ಲಿ ಸ್ವಲ್ಪ ಸಮಯ ಮಾತಿನ ಜಟಾಪಟಿ ನಡೆದಿದೆ. ನಂತರ ಇವರ ಮನವಿಗೆ ಸ್ಪಂದಿಸಿ ನಗರಸಭೆ ಅಧ್ಯಕ್ಷ ಆರ್.ಮೋಹನ ಹಾಗೂ ಅಧಿಕಾರಿಗಳು ಅವುಗಳನ್ನು ಅರಸೀಕೆರೆ ಗೋ ಶಾಲೆಗೆ ಬಿಟ್ಟು ರಕ್ಷಣೆ ಮಾಡಿದ್ದಾರೆ.
ಈ ವೇಳೆ ಮಾತನಾಡಿರುವ ಪ್ರವೀಣಗೌಡ ಇತ್ತೀಚೆಗೆ ಸಂತೆಯಲ್ಲಿ ಕರುಗಳನ್ನು ರೈತರು ತಂದು ಬಿಟ್ಟು ಹೋಗುತ್ತಿದ್ದಾರೆ. ಗೋವುಗಳಿಗೆ ರಕ್ಷಣೆ ಇಲ್ಲದಾಗಿದೆ. ಇದೇ ರೀತಿ ಹಾಸನ ನಗರದಾದ್ಯಂತ ದನಗಳು ಹೆಚ್ಚಾಗಿದ್ದು ಇವುಗಳನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು ತಾಲೂಕಿಗೆ ಒಂದು ಗೋ ಶಾಲೆಗಳನ್ನು ತೆರೆದು ದನಕರುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಗೋವುಗಳ ರಕ್ಷಣೆ ವಿಚಾರದಲ್ಲಿ ಪ್ರಾಣಿ ದಯಾ ಸಂಘ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಸಭೆ ಸಮಾರಂಭಗಳಿಗೆ ಮಾತ್ರ ಈ ಸಂಘ ಸೀಮಿತವಾಗಬಾರದು ರಕ್ಷಣೆಗೂ ಕೂಡ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.