ಬೇಲೂರು: ರಾಜ್ಯದ 224 ಕ್ಷೇತ್ರದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರ ಅತ್ಯಂತ ಹಿಂದುಳಿದಿದ್ದು, ಹಾಗೆಯೇ ಇಲ್ಲಿ ಭ್ರಷ್ಟಾಚಾರ ಮತ್ತು ಮದ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಮುಕ್ತ ಕ್ಷೇತ್ರಕ್ಕೆ ಒತ್ತು ನೀಡಬೇಕಿದೆ. ಹಾಗೆಯೇ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ, ಮದ್ಯವರ್ತಿಗಳ ಹಾವಳಿಗೆ ಶೀಘ್ರವೇ ಕಡಿವಾಣ ಹಾಕಲಾಗುತ್ತದೆ ಎಂದು ಬೇಲೂರು ಶಾಸಕ ಹೆಚ್.ಕೆ ಸುರೇಶ್ ಇಲಾಖಾವಾರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಪುರಸಭಾ ಮುಂಭಾಗದಲ್ಲಿ ನಡೆದ ‘ನನ್ನ ಲೈಪ್ ನನ್ನ ಸ್ವಚ್ಛ ನಗರ’ ಎಂಬ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಯೋಜನೆ ಜೊತೆಯಲ್ಲಿ ಇಲ್ಲಿನ ಅಡಗಿರುವ ಭ್ರಷ್ಟಾಚಾರ ಮತ್ತು ಮದ್ಯವರ್ತಿಗಳೆಂಬ ಕಸದ ಸ್ವಚ್ಛತೆಗೆ ಎಲ್ಲರೂ ಕೂಡ ಕೈ ಜೊಡಿಸಬೇಕಿದೆ. ಒಂದು ಕೈಯಲ್ಲಿ ಯಾವುದೇ ಕಾರಣಕ್ಕೂ ಚಪ್ಪಾಳೆ ಹೊಡೆಯಲು ಸಾದ್ಯವಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣದಿಂದ ಮಾಜಿ ಸಚಿವರಾದ ಬಿ. ಶಿವರಾಂ ರವರು ಮತ್ತು ಪುರಸಭಾ ಕಾಂಗ್ರೆಸ್ ಸದಸ್ಯರು ಕ್ಷೇತ್ರದ ಅಭಿವೃದ್ದಿಗೆ ಪಕ್ಷಾತೀತವಾಗಿ ಸಹಕರಿಸಬೇಕು ಎಂದ ಅವರು ಬೇಲೂರು ಹೇಳಿ-ಕೇಳಿ ಪ್ರವಾಸಿ ಮತ್ತು ಶಿಲ್ಪಕಲಾ ನಾಡು, ಇಲ್ಲಿನ ಅಭಿವೃದ್ಧಿಯನ್ನು ಇಡೀ ದೇಶವೇ ಗಮನಿಸುವ ಕಾರಣದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಿಂದ ಕೆಲಸ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದರು.
ಪುರಸಭಾ ಅಧ್ಯಕ್ಷೆ ತೀರ್ಥ ಕುಮಾರಿ ಮಾತನಾಡಿ, ಪಟ್ಟಣದ ಸ್ವಚ್ಛತೆಗೆ ಪುರಸಭೆ ಮನೆ-ಮನೆ ಬಳಿಗೆ ಕಸ ವಿಲೇವಾರಿ ವಾಹನ ಕಳಿಸಿದರೂ ಕೂಡ ಬಹುತೇಕ ಶಿಕ್ಷಣವಂತರೇ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ, ನಿಜಕ್ಕೂ ಸದೃಡ ಸಮಾಜ ತಲೆತಗ್ಗಿಸಬೇಕಿದೆ. ವಿಶೇಷವಾಗಿ ಪ್ರವಾಸಿ ತಾಣ ಬೇಲೂರು ಪ್ಲಾಸ್ಟಿಕ್ ಮುಕ್ತವಾಗಬೇಕಿದೆ. ಈ ನಿಟ್ಟಿನಲ್ಲಿ ನನ್ನ ಲೈಪ್ ನನ್ನ ಸ್ವಚ್ಛ ನಗರದಲ್ಲಿನ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ, ಮರುಬಳಕೆ ಮಾಡಲು ಪಟ್ಟಣದ ಐಡಿಎಸ್‌ಎಂಟಿ ಮತ್ತು ಪಂಪೌಹೌಸ್ ರಸ್ತೆಯಲ್ಲಿ ಮಳಿಗೆ ತೆರೆದಿದ್ದು, ಅಲ್ಲಿಗೆ ವಸ್ತುಗಳನ್ನು ನೀಡಬೇಕು. ವಿಶೇಷವಾಗಿ ಕೋಳಿ ಅಂಗಡಿ, ಬಾರ್ ಹಾಗೂ ಬೇಕರಿ ಅಂಗಡಿಗಳ ತ್ಯಾಜ್ಯ ಹೆಚ್ಚಾಗಿಯೇ ರಸ್ತೆ ಇಕ್ಕಲೆಯಲ್ಲಿ ರಾತ್ರೋರಾತ್ರಿ ಹಾಕುವ ಹವ್ಯಾಸ ಬೆಳೆಸಿಕೊಂಡಿದ್ದಾರೆ ಇದನ್ನು ಬಿಟ್ಟು ಪುರಸಭೆಯೊಂದಿಗೆ ಸಹಕಾರ ನೀಡಬೇಕು ಎಂದ ಅವರು ನೂತನ ಶಾಸಕರಾದ ಹೆಚ್.ಕೆ ಸುರೇಶ್ ಅವರು ಕೂಡ ಪುರಸಭಾ ಸಮಗ್ರ ಅಭಿವೃದ್ಧಿಯಲ್ಲಿ ಹಿರಿಯ ಪಾತ್ರ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಜಮಿಲಾ ತೌಫಿಕ್, ಜಿ.ಶಾಂತ ಕುಮಾರ್, ಬಿ.ಗಿರೀಶ್, ಜಗದೀಶ್, ಉಷಾ, ಶ್ರೀನಿವಾಸ್, ಪ್ರಭಾಕರ್, ಅಕ್ರಮ್ ಪಾಷ, ನಾಮಿನಿ ಸದಸ್ಯರಾದ ಪೈಂಟ್ ರವಿ, ಜಗದೀಶ್, ಮಂಜುನಾಥ್, ಮುಖ್ಯಾಧಿಕಾರಿ ಮಂಜುನಾಥ್ ಸೇರಿದಂತೆ ಅಭಿಯಾನದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಸೌಭಾಗ್ಯ, ಅಂತೋಣಿ, ಸಂಪತ್ತು ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.