ಕೊಣನೂರು: ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಡೆಯುತ್ತಿರುವ 20 ನೇ ವರ್ಷದ ಸಂಗೀತೋತ್ಸವದ ಅಂಗವಾಗಿ ಭಾನುವಾರ ರಾತ್ರಿ 7:30 ಕ್ಕೆ ಪವಿತ್ರ ಕಾವೇರಿ ನದಿಯ ತಟದಲ್ಲಿ ತೆಪ್ಪೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಕಾವೇರಿ ನದಿ ದಂಡೆಯಲ್ಲಿ ನಡೆಯುವ ತೆಪ್ಪೋತ್ಸವ ಹಾಗೂ ಆಕಾಶದಲ್ಲಿ ಬಣ್ಣ ಬಣ್ಣದ ಪಟಾಕಿಗಳು ಸಿಡಿಯುತ್ತಿರುವುದನ್ನು ಕಣ್ತುಂಬಿಕೊಂಡು ಆಸ್ವಾದಿಸಿದರು.
ಇದೇ ಸಂದರ್ಭದಲ್ಲಿ ಗಾನ ಕಲಾಭೂಷಣ ವಿದ್ವಾನ್, ಡಾ|ಆರ್.ಎನ್ ಶ್ರೀ ಲತಾ ಅವರಿಗೆ ನಾಚಾರಮ್ಮ ಪ್ರಶಸ್ತಿ-2023 ಮತ್ತು ಗಾನಕಲಾ ಸ್ಪರ್ಷಮಣಿ ಬಿರುದು ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರಶಸ್ತಿ ಮತ್ತು ಬಿರುದು ಪಡೆಯುತ್ತಿರುವುದು ನನ್ನ ಬದುಕಿನ ಅಪೂರ್ವ ಕ್ಷಣಗಳನ್ನು ಎಂದೆಂದೂ ಮರೆಯಲಾಗುವುದಿಲ್ಲ. ನಾನಿಂದು ಸಾವಿರಾರು ಜನರ ಎದುರು ಪ್ರಶಸ್ತಿಗೆ ಭಾಜನವಾಗುವ ಶಕ್ತಿಯನ್ನು ನನ್ನಲ್ಲಿ ತುಂಬಿ ಒತ್ತಾಸೆಯಾಗಿ ನಿಂತ ಆರ್.ಕೆ ಪದ್ಮನಾಭ್ ಮತ್ತು ನನ್ನ ಕುಟುಂಸ್ಥರಿಗೆ ನಾನು ಆಬಾರಿಯಾಗಿರುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ಪ್ರಶಸ್ತಿ ಪ್ರಧಾನ ಮಾಡಿದ ಕರ್ನಾಟಕ ಬ್ಯಾಂಕ್ ಚೇರ್ ಮ್ಯಾನ್ ಪಿ. ಪ್ರದೀಪ್ ಕುಮಾರ್ ಮಾತನಾಡಿ ಸಂಗೀತಕ್ಕೆ ಮನಸ್ಸು ಮತ್ತು ಜನರನ್ನು ಒಗ್ಗೂಡಿಸುವ ಶಕ್ತಿಯಿದೆ. ಭಾರತದ ಅಮೋಘ ಸಂಸ್ಕ್ರತಿಯಾಗಿರುವ ಸಂಗೀತವನ್ನು ಉಳಿಸಿ ಬೆಳೆಸಲು ಆರ್.ಕೆ ಪದ್ಮನಾಭ್ ರ ಪ್ರಯತ್ನವನ್ನು ಎಲ್ಲರೂ ಮೆಚ್ಚಬೇಕಿದೆ. ರಾಜ್ಯದ ಮೂಲೆಯಲ್ಲಿರುವ ರುದ್ರಪಟ್ಟಣದಲ್ಲಿ ಪ್ರಸಿದ್ಧ ಸಂಗೀತೋತ್ಸವನ್ನು ನಡೆಸಲು ದೇಶದ ವಿವಿಧೆಡೆಯಿಂದ ಖ್ಯಾತನಾಮ ಕಲಾವಿದರನ್ನು ಕರೆತಂದು ದೊಡ್ಡಮಟ್ಟದ ಉತ್ಸವವನ್ನು ಕಳೆದ 20 ವರ್ಷಗಳಿಂದಲೂ ಹಮ್ಮಿಕೊಂಡು, ಗ್ರಾಮೀಣ ಭಾಗದಲ್ಲೂ ಸಂಗೀತದ ಆಸಕ್ತಿಯನ್ನು ಬೆಳೆಸುವ ಪ್ರಯತ್ನಕ್ಕೆ ಯಶಸ್ಸು ದೊರಕಲಿ, ಕರ್ನಾಟಕ ಬ್ಯಾಂಕ್ ಅವರ ವಿಶೇಷ ಕಾರ್ಯಗಳಿಗೆ ಎಂದಿಗೂ ಜೊತೆಗೆ ನಿಲ್ಲುತ್ತದೆ ಎಂದರು. ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ಅಧ್ಯಕ್ಷ ಗಾನ ಕಲಾಭೂಷಣ ವಿದ್ವಾನ್ ಆರ್.ಕೆ ಪದ್ಮನಾಭ್ ಮಾತನಾಡುತ್ತಾ ಪಟ್ಟಣ ಪ್ರದೇಶಗಳಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಂಗೀತದ ಮಹತ್ವ ಅರಿವು ಮೂಡಿಸುವ ಉದ್ದೇಶದಿಂದ ರುದ್ರಪಟ್ಟಣ ಸಂಗೀತೋತ್ಸವ ಸಮಿತಿಯ ವತಿಯಿಂದ ಪ್ರತಿವರ್ಷ ವಾರ್ಷಿಕ ಸಂಗೀತೋತ್ಸವವನ್ನು ಮುನ್ನಡೆಸಿಕೊಂಡು ಬರುತ್ತಿದೆ. 2023 ರ ಸಂಗೀತೋತ್ಸವದಲ್ಲಿ ವಿಶೇಷವಾಗಿ ಯುವ ಸಂಗೀತ ಪ್ರತಿಭೆಗಳಿಗೆ ಹೆಚ್ಚಿನದಾಗಿ ವೇದಿಕೆ ಒದಗಿಸಿ ಕೊಡಲಾಯಿತು ಎಂದರು.
ಸಂಜೆ ಸಪ್ತಸ್ವರ ಮಂದಿರದ ಬಳಿಯಿಂದ ಕಾವೇರಿ ನದಿಯವರೆಗೆ ಗಾನ ಕಲಾಭೂಷಣ ವಿದ್ವಾನ್, ಡಾ|ಆರ್.ಎನ್ ಶ್ರೀಲತಾರನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಮಂಗಳ ವಾದ್ಯ ಸಮೇತ ಮೆರವಣೆಗೆಯಲ್ಲಿ ಕರೆತರಲಾಯಿತು. ಚನ್ನಕೇಶವ ಸ್ವಾಮಿಯ ಉತ್ಸವಮೂರ್ತಿಯನ್ನು ಕಾವೇರಿ ನದಿಯಲ್ಲಿ ಸಿದ್ಧಪಡಿಸಿದ್ದ ವಿದ್ಯುತ್ ಅಲಂಕೃತ ತೆಪ್ಪದಲ್ಲಿ ಕುಳ್ಳಿರಿಸಿ ತೆಪ್ಪೋತ್ಸವ ನೆರವೇರಿಸಲಾಯಿತು. ತೆಪ್ಪೋತ್ಸವ ವೇಳೆ ಸಿಡಿಸಿದ ಪಠಾಕಿಗಳು ಆಗಸದಲ್ಲಿ ಚಿತ್ತಾರ ಮೂಡಿಸಿದವು. ಪ್ರಶಸ್ತಿ ಪ್ರಧಾನ ಸಮಾರಂಭದ ನಂತರ ಕುಮಾರಿ ಅಪೂರ್ವ ಪ್ರದೀಪ್ ಅವರು ಭರತನಾಟ್ಯ ಪ್ರದರ್ಶನ ನೀಡಿದರು. ಶಾಸಕ ಎ.ಮಂಜು, ಕರ್ನಾಟಕ ಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಮೇಶ್ ರಾವ್, ಸ್ಥಳೀಯರ ಜೊತೆಗೆ ವಿವಿಧೆಡೆಗಳಿಂದ ಆಗಮಿಸಿದ ಸಾವಿರಾರು ಸಂಗೀತಾ ಆಸಕ್ತರಿದ್ದರು.