ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಕೋಡಿಮಠದಲ್ಲಿ ಶ್ರೀ ಮಹಾದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಶ್ರೀ ಮಠದ ಪೀಠಾಧಿಪತಿಗಳು ಹಾಗೂ ಅಧ್ಯಕ್ಷ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ, ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಸಂಪ್ರದಾಯದಂತೆ ಹಾರನಹಳ್ಳಿ ಗ್ರಾಮದಲ್ಲಿ ಭಿಕ್ಷಾಟನೆ ಮಾಡಿದರು.
ಶ್ರೀಗಳು ತಮ್ಮ ಗ್ರಾಮಕ್ಕೆ ಭಿಕ್ಷಾಟನೆಗೆ ಬರುವ ಸಂಪ್ರದಾಯವನ್ನು ಅರಿತಿದ್ದ ಗ್ರಾಮಸ್ಥರು, ಹೆಂಗಳೆಯರು ಶ್ರದ್ಧಾ, ಭಕ್ತಿ, ಸಡಗರದೊಂದಿಗೆ ಸ್ವಾಮೀಜಿ ಅವರ ಪಾದಪೂಜೆ ಮಾಡಿ, ಧವಸ, ಧಾನ್ಯಗಳನ್ನು ಜೋಳಿಗೆಗೆ ತುಂಬುವ ಮೂಲಕ ಗುರುವರ್ಯರ ಅನುಗ್ರಹಕ್ಕೆ ಪಾತ್ರರಾದರು.
ಭಿಕ್ಷಾಟನೆಗೆ ಸಾಗುವ ಮಾರ್ಗಗಳಲ್ಲಿ ಗ್ರಾಮದ ಯುವಕರು ತಳಿರು-ತೋರಣ ಕಟ್ಟಿ ಸಿಂಗಾರ ಮಾಡಿದ್ದರು. ಹೆಣ್ಣು ಮಕ್ಕಳು ಮನೆಯ ಅಂಗಳದಿ ರಂಗೋಲಿ ಬಿಡಿಸಿ ಮೆರುಗು ನೀಡಿದ್ದರು. ಮನೆಗೆ ಬಂದ ಗುರುಗಳಿಗೆ ಒಳ ಪ್ರವೇಶ ನೀಡಿ, ಆರತಿ ಎತ್ತಿ ಬರಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಶ್ರೀಗಳು ಜಾತಿ, ಮತ, ಪಂಥ ನೋಡದೆ ಪ್ರತಿಯೊಬ್ಬರ ಭಕ್ತರ ಮನೆಗೂ ಭೇಟಿ ಕೊಡುವ ಮೂಲಕ ಭಿಕ್ಷಾಟನೆ ಸ್ವೀಕರಿಸಿ, ಹರಸಿದರು.
ನಾಳೆ ಇದೇ ಹಾರನಹಳ್ಳಿ ಗ್ರಾಮದಲ್ಲಿ ಶ್ರೀ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ವೇಳೆ ಮಾತನಾಡಿದ ಶ್ರೀಗಳು, ಭಿಕ್ಷಾಟನೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂದರು. ನೂರಾರು ವರ್ಷಗಳ ಹಿಂದೆ ನಮ್ಮ ಗುರುಗಳು ಬೆಟ್ಟದಲ್ಲಿದ್ದರು.ಈ ನಡುವೆ ಹಾರನಹಳ್ಳಿ ಗ್ರಾಮದ ಪಾಳೆಗಾರನ ಮನೆಗೆ ಬಂದು ಪಾದಪೂಜೆ ಮಾಡಿಸಿಕೊಂಡರು.
ನಂತರ ಪಾಳೆಗಾರನಿಗೆ ಮಕ್ಕಳಿಲ್ಲದ ಕಾರಣ, ಆಶೀರ್ವಾದ ಮಾಡಿ ಹೆಣ್ಣು ಮಗು ಕರುಣಿಸಿದರು. ಮಗುವಿಗೆ ನಾಮಕರಣ ಮಾಡುವಾಗ ಅರಮನೆಯಲ್ಲೇ ಪಾದಪೂಜೆ ಮಾಡಿದರು. ಈ ವೇಳೆ ಪ್ರತಿ ವರ್ಷ ನಮ್ಮ ಮನೆಗೆ ಪಾದ ಪೂಜೆಗೆ ಬರಬೇಕು ಎಂದು ಪಾಳೆಗಾರ ಮನವಿ ಮಾಡಿದಾಗ, ಇಲ್ಲ ನಾನು ಪ್ರತಿಯೊಬ್ಬ ಭಕ್ತರ ಮನೆಗೂ ಹೋಗುವೆ ಎಂದರು. ಅಂದಿನಿಂದ ಪಾದಪೂಜೆ ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ ಎಂದರು.
ಬಿಕ್ಷಾಟನೆಗೆ ಅದರದ್ದೇ ಆದ ಮಹತ್ವವಿದೆ ಶಿವನು ಬಸವನನ್ನು ಮುಂದಿಟ್ಟು ಭಿಕ್ಷಾಟನೆ ಮಾಡಿ, ಜಗವನ್ನು ಸಲಹಿದ ಎಂಬ ಸಂಪ್ರದಾಯ ಇರುವುದರಿಂದ ಅಂದಿನಿಂದಲೂ ಭಿಕ್ಷಾಟನೆಗೆ ಮಹತ್ವ ಇದ್ದು, ಆಗಿನಿಂದಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕೋಡಿಮಠದ ಉತ್ತರಾಧಿಕಾರಿಗಳಾದ ಚೇತನ್ ಮರಿದೇವರು, ಪೀಟಾ ಅಭಿಮಾನಿಗಳು ಉಪಸ್ಥಿತರಿದ್ದರು.