ಕೊಣನೂರು: ರಾಮನಾಥಪುರದ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಸಂಗೀತೋತ್ಸವಕ್ಕೆ ಗಾನಕಲಾಭೂಷಣ ಡಾ| ವಿದ್ವಾನ್ ಆರ್.ಕೆ ಪದ್ಮನಾಭನ್ ಚಾಲನೆ ನೀಡಿದರು.
ಗಾನಕಲಾಭೂಷಣ ಡಾ| ವಿದ್ವಾನ್ ಆರ್.ಕೆ ಪದ್ಮನಾಭನ್ 5 ದಿನಗಳ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಅರಳುವ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಿಕೊಡುವ ರುದ್ರಪಟ್ಟಣ ಸಂಗೀತೋತ್ಸವದ ಮೂಲ ಉದ್ದೇಶವಾಗಿದೆ. ಸಂಗೀತವು ಹೃದಯದ ಭಾಷೆಯಾಗಿದ್ದು ಎಲ್ಲಾ ಸಮಸ್ಯೆಗಳಿಗೂ ಪರಿಹಾರಕ್ಕಾಗಿರುವ ಸಾಧನವಾಗಿದೆ. ಅಂತರಂಗದ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಏಕೈಕ ನಾದರೂಪವೆ ಸಂಗೀತ. ಅನೇಕ ಸಾಧಕರು ತಮ್ಮ ಸಂಗೀತದಿಂದಲೆ ದೇವರುಗಳನ್ನು ಒಲಿಸಿಕೊಂಡಿರುವ ಉದಾಹರಣೆಗಳು ಸಂಗೀತದ ಶಕ್ತಿಗಿರುವ ಕೈಗನ್ನಡಿ, ಮುತ್ತುಸ್ವಾಮಿ ದೀಕ್ಷಿತರು ಹಾಡಿ ಮಳೆಯನ್ನು ಸುರಿಸಿದ್ದು, ತ್ಯಾಗರಾಜರು ಸಂಗೀತ ಹಾಡಿ ಕಳ್ಳರನ್ನು ಓಡಿಸಿದ್ದು, ಇಂತಹ ಘಟನೆಗಳು ಸಂಗೀತಕ್ಕಿರುವ ಅದ್ಭುತ ಶಕ್ತಿಯನ್ನು ತಿಳಿಸುತ್ತವೆ. ರುದ್ರಪಟ್ಟಣದ ಸಂಗೀತ ವಿದ್ವಾಂಸರು ಸಂಗೀತವನ್ನು ಉಪಾಸನೆ ಮಾಡಿ ಸಾಕ್ಷಾತ್ಕಾರವನ್ನು ಕಂಡುಕೊಂಡಿರುವ ಪರಂಪರೆಯನ್ನು ಮುನ್ನಡೆಸಿಕೊಂಡು ಸಾಗುತ್ತಾ ಅವರಿಗೆ ಗೌರವ ನೀಡುವ ಉದ್ದೇಶವೆ ಸಂಗೀತೋತ್ಸವ ಎಂದರು.
ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಬುಧವಾರ ಚಾಲನೆಗೊಂಡ 5 ದಿನಗಳ ವಾರ್ಷಿಕ ಸಂಗೀತೋತ್ಸವದಲ್ಲಿ ಬಾಲ, ಯುವ ಪ್ರತಿಭೆಗಳ ಭರತ ನಾಟ್ಯ, ಗಾಯನ ಪಕ್ಕವಾದ್ಯ-ವಾದನ ಮೆಚ್ಚುಗೆ ಪಾತ್ರವಾದವು. ಶ್ರಾವ್ಯ ಹನಸೋಗೆ ಹೆಜ್ಜೆಹಾಕಿ ಸೈ ಎನಿಸಿಕೊಂಡರು.
ನಂತರ ಚಿ.ಅತ್ರಿ ಕೌಶಿಕ್ ತಮ್ಮ ಮೃದಂಗವಾದನದಲ್ಲಿ ಯುವ ಕಲಾವಿದೆ ಸಂಜನಾ ಶ್ರೀ ನಿಧಿ, ಕು. ಹ್ರಿಷಿತ ಕೇದಗೆ ಮತ್ತು ಚಿ.ಅಕ್ಷಯ್ ಯುಗಳ ಪಿಟೀಲು ವಾದನ, ಕೌಶಿಕ್ ರುದ್ರಪಟ್ಟಣ ಮತ್ತು ವಿ. ಮಾಲಿನಿ ಸುಬ್ರಮಣ್ಯ ನಡೆಸಿಕೊಟ್ಟ ಗಾಯನ, ವಿಶ್ವಜಿತ್ ಮತ್ತೂರು ಹಾಗೂ ಅಪ್ರಮೇಯ ಭಾರಧ್ವಾಜ್ ರ ಪಕ್ಕವಾದ್ಯ ನುಡಿಸಿ ಸಾಥ್ ನೀಡಿದರು. ಭಾಸ್ಕರ್ ಅವಧಾನಿ, ಆರ್.ಎಲ್ ಕೃಪಾ, ಸತ್ಯಮೂರ್ತಿ, ಗಾನ ಕಲಾಭೂಷಣ ಶ್ರೀ ಲತಾ ಸೇರಿದಂತೆ ರಾಜ್ಯ ಮತು ವಿವಿಧ ರಾಜ್ಯಗಳಿಂದ ಬಂದಿದ್ದ ಕಲಾವಿದರು ಮತ್ತು ಸಂಗೀತ ಪ್ರಿಯರಿದ್ದರು.