ಬೇಲೂರು: ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ 142 ವರ್ಷಗಳ ಇತಿಹಾಸವಿದ್ದು, ವೈದ್ಯಕೀಯ ಸೇವೆಯಲ್ಲಿ ಗತವೈಭವದಿಂದ ಮೆರೆಯುತ್ತಿದ್ದು ಬಡವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬರುತ್ತಿದೆ ಎಂದು ಫಾದರ್ ಮುಲ್ಲರ್ ಆಸ್ಪತ್ರೆಯ ಪಿ.ಆರ್.ಒ ಡೇವಿಡ್ ಹೇಳಿದರು.
ಅರೇಹಳ್ಳಿಯ ರಾಮನಗರದಲ್ಲಿರುವ ರೋಟರಿ ಶಾಲೆಯಲ್ಲಿ ಆಸ್ಟೀನ್ ರೋಚ್ ಕುಟುಂಬದ ಪ್ರಾಯೋಜಕತ್ವದಲ್ಲಿ ರೋಟರಿ ಸಂಸ್ಥೆ ಅರೇಹಳ್ಳಿ, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಹಾಗೂ ಪೂರ್ಣಸುಧಾ ಕ್ಯಾನ್ಸರ್ ಫೌಂಡೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, ಆಸ್ಪತ್ರೆಯ ಎಲ್ಲಾ ವ್ಯವಸ್ಥೆಗಳನ್ನು ನಾವು ಇಲ್ಲಿಗೆ ತರಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿ ಬಳಿಕ ಕೊಡುವ ಕೆಂಪು ಚೀಟಿಯನ್ನು ಜೋಪಾನವಾಗಿಟ್ಟುಕೊಂಡು ನಮ್ಮ ಆಸ್ಪತ್ರೆಗೆ ಬಂದರೆ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಬಹುದು. ಕೆಂಪು ಚೀಟಿ ತಂದವರಿಗೆ ನಾವು ಮತ್ತೊಂದು ಚೀಟಿಯನ್ನು ಕೊಡುತ್ತೇವೆ. ಆ ಚೀಟಿ ನಿಮ್ಮ ಬಳಿಯಿದ್ದರೆ ಚಿಕಿತ್ಸೆಯ ದರದಲ್ಲಿ ರಿಯಾಯಿತಿ ಪಡೆಯಲು ಅನುಕೂಲವಾಗುತ್ತದೆ. ಕಣ್ಣು, ಚರ್ಮ, ಕಿವಿ, ಗಂಟಲು, ಮೂಗು ಹೀಗೆ ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದ ಸುಮಾರು 600 ಮಂದಿಗೆ ಈ ಶಿಬಿರದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದರು.
ಚಿಕಿತ್ಸೆ ಪಡೆದ ಹಿರಿಗರ್ಜೆ ಗ್ರಾಮದ ಧರ್ಮರಾಜ್ ಮಾತನಾಡಿ, ಪ್ರತಿ ವರ್ಷ ರೋಟರಿ ಸಂಸ್ಥೆಯವರು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡುತ್ತಿದ್ದಾರೆ. ಬಡವರು ತಮ್ಮಲ್ಲಿರುವ ಕಾಯಿಲೆಗಳನ್ನು ಪರೀಕ್ಷೆ ಮಾಡಲು ಜಿಲ್ಲಾ ಕೇಂದ್ರಕ್ಕೆ ಅಲೆದಾಡುವ ಸಂದರ್ಭದಲ್ಲಿ ರೋಟರಿ ಸಂಸ್ಥೆಯು ಅರೇಹಳ್ಳಿಯಲ್ಲಿ ಇಂತಹ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ರೋ. ನದೀಮ್ ಇಕ್ಬಾಲ್, ಕಾರ್ಯದರ್ಶಿ ಮಂಜುನಾಥ್ ಯು, ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯ ಡಾ|ನಾರ್ಮನ್ ಮೆಂಡೋನ್ಸಾ, ಪೂರ್ಣಸುಧಾ ಸ್ತನ ಕ್ಯಾನ್ಸರ್ ವಿಭಾಗದ ಡಾ|ಪ್ರಮೀಳ, ಮುಖ್ಯ ಶಿಕ್ಷಕಿ ತುಳಸಿ, ರೋ.ವಿನಾಯಕ್, ರೋ.ಪಿಂಟೋ, ರೋ.ಬಿಪಿ ಹರೀಶ್, ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.