ಬೇಲೂರು: ಕರ್ನಾಟಕ ರಕ್ಷಣಾ ವೇದಿಕೆಗೆ ೨೫ ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೇಲೂರಿನಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರವೇ (ನಾರಾಯಣಗೌಡ) ಬಣದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕರ್ನಾಟಕದಲ್ಲಿ ಕರವೇ ಸಂಘಟನೆಯನ್ನು ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಪ್ರಾರಂಭಿಸಿ ೨೫ ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಸಂಘಟನೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ ಕರವೇ ಕೇವಲ ಹೋರಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ನಾಡು, ನುಡಿಗೆ ಸೇರಿದಂತೆ ಹೇಗೆ ಹೋರಾಟ ಮಾಡುತ್ತೇವೆಯೋ ಹಾಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ನಮ್ಮ ಸಂಘಟನೆ ಇದೆ ಎಂಬುದನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಾಗೂ ಕರವೇಗೆ ೨೫ ವರ್ಷ ತುಂಬಿದ ಕಾರಣ ಮಾ. ೧೫ರಂದು ಬುಧವಾರ ಬೇಲೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಂಜೆ ೬ ಗಂಟೆಗೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟ ನಟಿಯರು ಹಾಗೂ ಜೂನಿಯರ್ ಪುನೀತ್ ರಾಜ್‌ಕುಮಾರ್, ಜೂನಿಯರ್ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಗಾನ ಕೋಗಿಲೆಯ ಅರ್ಜುನ್ ಇಟಗಿ, ಕಾಮಿಡಿ ಕಿಲಾಡಿ ಖ್ಯಾತಿಯ ಜೋಡಿ ನಂಬರ್ ವನ್ ಮಾನಸ ಸಂತೊಷ್, ಮತ್ತು ರಾಜಕೀಯ ಮುಖಂಡರು ಸಹ ಆಗಮಿಸಲಿದ್ದಾರೆ. ಜತೆಗೆ ಕರ್ನಾಟಕದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕಲಾವಿದ, ಮಲೆನಾಡಿನ ಹೆಸರಾಂತ ಅಭಿನವ ಮ್ಯೂಸಿಕಲ್ ಈವೆಂಟ್ಸ್ ನೃತ್ಯ ಹಾಗೂ ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿ ಡಾ. ನಾಡೋಜ, ವೃಕ್ಷಮಾತೆ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಅವರನ್ನು ದೊಡ್ಡ ಮಟ್ಟದಲ್ಲಿ ಅಭಿನಂದಿಸಲಿದ್ದೇವೆ. ಆದ್ದರಿಂದ ತಾಲೂಕಿನ ಸಮಸ್ತ ಜನತೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕರವೇ (ನಾರಾಯಣಗೌಡ) ಬಣದ ಜಿಲ್ಲಾ ಉಪಾಧ್ಯಕ್ಷ ಸೀತಾರಾಮ್, ತಾಲೂಕು ಗೌರಾವಾಧ್ಯಕ್ಷ ತಾರಾನಾಥ, ತಾಲೂಕು ಉಪಾಧ್ಯಕ್ಷ ಮಹಮದ್ ಅನೀಫ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಸಂ.ಕಾರ್ಯದರ್ಶಿ ಪ್ರಸನ್ನ ಇದ್ದರು.