ಜಾವಗಲ್: ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಹಾಸನ ಜಿಲ್ಲಾ ಹಾಗೂ ಬೇಲೂರು ತಾಲ್ಲೂಕು ಘಟಕದ ವತಿಯಿಂದ ಪವಾಡ ಪುರುಷ ಸದ್ಗುರು ಸಂತ ಸೇವಾಲಾಲ್ ರವರ 284ನೇ ಜಯಂತಿ ಕಾರ್ಯಕ್ರಮದ ಸೇವಾಲಾಲ್ ಭಾವಚಿತ್ರ ಮೆರವಣಿಗೆಗೆ ಜಾವಗಲ್ ಪೋಲಿಸ್ ಠಾಣಾ ಮುಖ್ಯಸ್ಥ ಮಂಜುನಾಥ ಚಾಲನೆ ನೀಡಿದರು.
ಗಣ್ಯರೊಂದಿಗೆ ವೇದಿಕೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್ ಲಿಂಗೇಶ ಉದ್ಘಾಟಿಸಿದರು. ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಶಾಸಕರು ಬಸವಣ್ಣ ಹಾಗೂ ಬುದ್ದರಂತೆ ಸಂತ ಸೇವಾಲಾಲ್‌ರವರು ಕೂಡ ಅಖಂಡ ಸಮಾಜ ಕಟ್ಟುವ ನಿಟ್ಟಿನಲ್ಲಿ ಶ್ರಮ ವಹಿಸಿದವರು. ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ವಚನ ಸಾಹಿತ್ಯದ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದವರು, ಮಹಿಳೆಯರಿಗೆ ಸಮಾನ ಅವಕಾಶ ನೀಡಿದವರು, ಮೇಲು ಕೀಳು ಜಾತಿ ಭೇಧಗಳನ್ನು ಮರೆತು ಎಲ್ಲಾ ವರ್ಗದ ಜನರಿಗೂ ಸಮಾನ ವೇದಿಕೆ ಸೃಷ್ಟಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಿದರೆ, 17ನೇ ಶತಮಾನದಲ್ಲಿ ಸಂತ ಸೇವಾಲಾಲ್‌ರವರು ಕೂಡ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅವರ ಜಯಂತಿಯ ದಿನ ನಾವು ನೀವು ಅವರ ಆದರ್ಶ ಜೀವನದ ಸಂಗತಿಗಳನ್ನು ಅಳವಡಿಸಿಕೊಂಡರೆ ಅವರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ನಾವು ಕೂಡ ಇಂತಹ ಮಹಾನ್ ಚೇತನರ ಆದರ್ಶ ಪಾಲಿಸೋಣವೆಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಹುಲ್ಲಳ್ಳಿ ಸುರೇಶ, ಆಲ್ ಇಂಡಿಯಾ ಬಂಜಾರ ಸಮಿತಿಯ ರಾಜ್ಯ ಅಧ್ಯಕ್ಷೆ ಶೈಲಾಬಾಯಿ, ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಯ್ಕ ಸಮುದಾಯ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸಂಘದ ರಾಷ್ಟ್ರೀಯ ಘಟಕದ ಕಾರ್ಯಾಧ್ಯಕ್ಷರಾದ ರಾಮಾನಾಯ್ಕ, ರಾಜ್ಯಾಧ್ಯಕ್ಷ ಪಾಂಡುರಂಗ ಪೆಮ್ಮಾರ, ಯುವ ಘಟಕದ ರಾಜ್ಯ ಅಧ್ಯಕ್ಷ ವಿಜಯ್ ಯಾದವ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶೈಲಾಬಾಯಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಮತಾ, ಸಹಕಾರ ಸಂಘದ ಅಧ್ಯಕ್ಷ ಗೋವಿಂದನಾಯ್ಕ, ಪುಣ್ಯಕೋಟಿ ಟ್ರಸ್ಟ್ ಅಧ್ಯಕ್ಷ ತೋಳಚನಾಯ್ಜ, ಸಬ್ ಇನ್ಸ್ಪೆಕ್ಟರ್ ಭರತ್, ಸಾರಿಗೆ ಇಲಾಖೆಯ ಪದ್ಮನಾಯ್ಕ, ಪಶು ಇಲಾಖೆಯ ನಿರ್ದೇಶಕ ಡಾ. ಆನಂದ, ಬಂಜಾರ ಸಮಾಜದ ಯುವ ಮುಖಂಡರಾದ ಸುರೇಶ, ಸುನಿಲ, ಚಂದ್ರನಾಯ್ಕ, ರಾಜಮುಲ್ಕಾನಾಯ್ಕ, ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಬಂಜಾರ ಸಮುದಾಯದ ಅನೇಕ ಮುಖಂಡರು ಭಾಗವಹಿಸಿದ್ದರು.