ಹಾಸನ: ಸಿಇಐಆರ್ ಪೋರ್ಟಲ್ ಮೂಲಕ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಸುಮಾರು 60 ಲಕ್ಷ ಮೌಲ್ಯದ 148 ಮೊಬೈಲ್ ಗಳನ್ನು ವಶಕ್ಕೆ ಪಡೆದು ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ನಗರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಪೋರ್ಟಲ್ ಉದ್ಘಾಟನೆಯಾದ ದಿನಾಂಕದಿಂದ ಇಲ್ಲಿಯವರೆಗೆ ವಿವಿಧ ಠಾಣೆಯಲ್ಲಿ ಸಾರ್ವಜನಿಕರಿಂದ 1,418 ಮೊಬೈಲ್‌ಗಳ ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿದೆ. ಇವುಗಳಲ್ಲಿ ಇಲ್ಲಿಯವರೆಗೆ ಒಟ್ಟು 148 ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದರು.
ಕಳೆದ ಏಪ್ರಿಲ್ ನಲ್ಲಿ 25 ಮೊಬೈಲ್‌ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ನೀಡಲಾಗಿದ್ದು, ಇದೀಗ ನೂರಕ್ಕೂ ಹೆಚ್ಚು ಮೊಬೈಲ್‌ಗಳನ್ನು ಪೋರ್ಟಲ್ ಸಹಾಯದಿಂದ ವಶಕ್ಕೆ ಪಡೆಯಲಾಗಿದೆ. ಮೊಬೈಲ್‌ಗಳನ್ನು ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ನೆರೆ ಜಿಲ್ಲೆಗಳಿಂದ ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ ಎಂದರು. ವಶಪಡಿಸಿಕೊಂಡ ಮೊಬೈಲ್‌ಗಳ ಪೈಕಿ ವಿವೋ ಕಂಪನಿಯ 74, ಸ್ಯಾಮ್ಸಂಗ್ 25 , ರೆಡ್ಮಿ 33, ಒನ್ ಪ್ಲಸ್ 11, ಹಾನರ್ ಎರಡು, ನೋಕಿಯಾ 3 ಮೊಬೈಲ್ ಗಳಾಗಿವೆ. ಪೋರ್ಟಲ್ ಮೂಲಕ ದಾಖಲಾದ ದೂರುಗಾಳ ಪೈಕಿ 123 ಮೊಬೈಲ್ ಗಳ ಮಾಹಿತಿ ಇದ್ದು ಇವುಗಳನ್ನು ಆದಷ್ಟು ಶೀಘ್ರವಾಗಿ ಪತ್ತೆ ಹಚ್ಚುವ ಕಾರ್ಯವನ್ನು ಮಾಡಿದ್ದೇವೆ ಎಂದು ಹೇಳಿದರು.
ಪೋರ್ಟಲ್ ನಲ್ಲಿ ದಾಖಲಾದ ಬಹುತೇಕ ಪ್ರಕರಣಗಳು ಕಳವಾಗಿರುವುದು ಹಾಗೂ ಸಾರ್ವಜನಿಕರೇ ಕಳೆದುಕೊಂಡಿರುವುದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅಂದರೆ, ಕಳ್ಳತನ ಮಾಡುವ ಗುಂಪು ( ನೆಟ್ವರ್ಕ್) ಮೂಲಕ ಕಾರ್ಯನಿರ್ವಹಿಸುತ್ತಿದ್ದರೆ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪತ್ತೆಹಚ್ಚಲಾಗುವುದು ಆದರೆ ಇದುವರೆಗೂ ದಾಖಲಾಗಿರುವ ದೂರುಗಳಲ್ಲಿ ಅಂತಹ ಯಾವುದೇ ಅಂಶಗಳು ಇಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಈ ಪೋರ್ಟಲ್ ಮೂಲಕ ಮೊಬೈಲ್ ಗಳನ್ನು ಪತ್ತೆ ಹಚ್ಚುವ ಕಾರ್ಯ ತ್ವರಿತಗತಿಯಲ್ಲಿ ಆಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಎಸ್ಪಿ ಮನವಿ ಮಾಡಿದರು.
ನೆರೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ಪತ್ತೆಯಾದಾಗ ನಿರ್ದಿಷ್ಟ ಠಾಣೆಯಿಂದ ಸಿಬ್ಬಂದಿಗಳನ್ನು ಕಳುಹಿಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ ಎಂದು ತಿಳಿಸಿದರು. ಇತ್ತೀಚಿಗೆ ನಗರದ ಮಸೀದಿಯಲ್ಲಿ ಕಂಪ್ಯೂಟರ್ ಹಾಗೂ ಕ್ಯಾಮೆರಾ ಕಳ್ಳತನ ಪ್ರಕರಣ ಸಂಬಂಧ ಅಗತ್ಯ ಕ್ರಮಗಳನ್ನು ಕೈ ಗೊಳ್ಳಲಾಗಿದ್ದು ಆದಷ್ಟು ಶೀಘ್ರವಾಗಿ ಪ್ರಕರಣ ಪತ್ತೆಹಚ್ಚಲಾಗುವುದು ಎಂದು ಹೇಳಿದರು.