ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ಜಂಬೂರು ಗ್ರಾಮದ ಶ್ರೀ ಜಕೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಬ್ರಹ್ಮರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಶ್ರೀ ಜಕೇಶ್ವರ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನಡೆದವು. ರಥೋತ್ಸವಕ್ಕೂ ಮುನ್ನ ಶ್ರೀ ಜಕೇಶ್ವರ ಸ್ವಾಮಿಯವರ ಉತ್ಸವವನ್ನು ಗ್ರಾಮದ ರಾಜ ಬೀದಿಗಳಲ್ಲಿ ನೆಡೆಸಿ ನಂತರ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ನಂತರ ರಥವನ್ನು ಭಕ್ತರು ಎಳೆದರು. ಸುತ್ತಮುತ್ತಲ ಗ್ರಾಮಗಳಾದ ದೇವಿಗೆರೆ, ತೆಂಕನಹಳ್ಳಿ, ಹುಲಿಕೆರೆ, ಮಂಚೇನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು. ರಥಕ್ಕೆ ಹಣ್ಣುದವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಪ್ರತಿನಿತ್ಯ ವಿವಿಧ ಉತ್ಸವಗಳು ನಡೆಯುತ್ತಿವೆ. ಭಕ್ತರಿಗೆ ಶ್ರೀ ಜಕೇಶ್ವರ ಸೇವಾ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರಥೋತ್ಸವದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ, ಗೀತಾ ಗೋಪಾಲಸ್ವಾಮಿ, ಮಾಜಿ ಜಿ.ಪಂ ಸದಸ್ಯ ಸದಸ್ಯರಾದ ಕುಸುಮ ಬಾಲಕೃಷ್ಣ, ಎಂ.ಎ ರಂಗಸ್ವಾಮಿ, ಪ್ರಮುಖರಾದ ಕುಮಾರಸ್ವಾಮಿ, ನಾರಾಯಣಸ್ವಾಮಿ, ಹಾಗೂ ಸುತ್ತಮುತ್ತಲ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಚನ್ನರಾಯಪಟ್ಟಣ ನುಗ್ಗೇಹಳ್ಳಿ ಹೋಬಳಿಯ ಜಂಬೂರು ಗ್ರಾಮದ ಶ್ರೀ ಜಕೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಭಾನುವಾರ ನೆರವೇರಿತು.