ಸಕಲೇಶಪುರ: ತಾಲೂಕು ಹೆತ್ತೂರು ಹೋಬಳಿಯ ಬೊಮ್ಮನಕೆರೆ, ಹರಗರಹಳ್ಳಿಯ ಇತಿಹಾಸ ಪ್ರಸಿದ್ಧವಾದ ಶ್ರೀ ನಂದೀಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಹೆತ್ತೂರಿನ ಸುತ್ತಮುತ್ತ ನಡೆಯುವ ದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಯನ್ನು ಹಿರಿಯರು ವರ್ಷ, ಮೂರು ವರ್ಷಕ್ಕೊಮ್ಮೆ, ಆರು ವರ್ಷಕ್ಕೊಮ್ಮೆ ಅಥವಾ ಒಂಭತ್ತು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿದ್ದರು. ಆದರೆ ಕೆಲವು ಕಾರಣಗಳಿಂದ ಇತಿಹಾಸ ಪ್ರಸಿದ್ಧವಾದ ಜಾತ್ರೆಯನ್ನು ಕಳೆದ 22 ವರ್ಷಗಳಿಂದ ಜಾತ್ರೆ ನೆರವೇರಿಸಲಾಗಿರಲಿಲ್ಲ. ಈ ವರ್ಷ ಗ್ರಾಮಸ್ಥರೆಲ್ಲ ಸೇರಿ 22 ವರ್ಷಗಳ ಬಳಿಕ ಈ ಬಾರಿ ವಿಜೃಂಭಣೆಯಿಂದ ಶ್ರೀ ನಂದೀಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಹಾಗೂ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿದ್ದಾರೆ.
ಮೇ 21 ಭಾನುವಾರದಿಂದ ಮೇ 23 ಮಂಗಳವಾರದವರೆಗೆ ಶ್ರೀ ನಂದೀಶ್ವರಸ್ವಾಮಿ ಜಾತ್ರಾ ಮಹೋತ್ಸವ ದೇವರ ವಿವಿಧ ಪೂಜೆಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್ ತಿಳಿಸಿದೆ. ಮೇ 21ರಂದು ವೀರಶೈವ ವಟುಗಳಿಗೆ ಶ್ರೀ ಸದಾಶಿವ ಸ್ವಾಮಿಗಳ ನೇತೃತ್ವದಲ್ಲಿ ಶಿವ ದೀಕ್ಷಾ ಕಾರ್ಯಕ್ರಮ 1,000 ಶುಲ್ಕದೊಂದಿಗೆ ನಡೆಯಲಿದೆ. ಮೇ 22ರಂದು ಮಲ್ಲಿಕಾರ್ಜುನ ಸ್ವಾಮಿಯವರಿಗೆ ರುದ್ರಾಭಿಷೇಕ ನಡೆಯಲಿದೆ. ಕಲ್ಮಠ ಶ್ರೀ ಮಹಾಂತ ಸ್ವಾಮಿ, ಕಿರಿಕೋಡ್ಲಿ ಮಠ ಶ್ರೀ ಸದಾಶಿವ ಸ್ವಾಮಿ ಇವರಿಂದ ದಿವ್ಯ ಆಶೀರ್ವಚನವಿರುತ್ತದೆ ಎಂದು ತಿಳಿಸಿದ್ದಾರೆ.
ಮೇ 23 ಮಂಗಳವಾರದಂದು ಶ್ರೀ ನಂದೀಶ್ವರ ಸ್ವಾಮಿಯ ಮೆರವಣಿಗೆ ಮತ್ತು ವೀರ ಗಾರರ ಹಾಗೂ ನಂದಿಧ್ವಜ ಕುಣಿತ ಇದ್ದು, ಪರಮ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಹಾಗೂ ತೆಂಕಲಗೂಡು ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಕಲ್ಮಠ ಶ್ರೀ ಮಹಾಂತ ಸ್ವಾಮಿ, ಕಿರಿಕೋಡ್ಲಿ ಮಠ ಶ್ರೀ ಸದಾಶಿವ ಸ್ವಾಮಿ ದಿವ್ಯ ಉಪಸ್ಥಿತಿ ಇರುತ್ತದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿ, ದಿವ್ಯ ಸ್ವಾಮಿಗಳ ಆಶೀರ್ವಚನ ಪಡೆಯಬೇಕೆಂದು ದೇವಸ್ಥಾನದ ಮುಖ್ಯಸ್ಥರು, ಟ್ರಸ್ಟಿಗಳು ಹಾಗೂ ಬೊಮ್ಮನಕೆರೆ, ಹರಗರಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕ್ಷೇತ್ರಕ್ಕೆ ಸಿದ್ದಗಂಗಾ ಶ್ರೀಗಳ ಆಗಮನ ಸಂತಸ: ಶಾಸಕ ಸಿಮೆಂಟ್ ಮಂಜು
ನಾನು ಶಾಸಕನಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ರಾಜ್ಯದ ಪ್ರತಿಷ್ಠಿತ ಮಠದ ಶ್ರೀ ಸಿದ್ದಗಂಗಾ ಶ್ರೀಗಳು ಬೊಮ್ಮನಕೆರೆ ಹರಗರಹಳ್ಳಿ ಗ್ರಾಮದಲ್ಲಿ ಮೇ 23ರಂದು ಜರುಗಲಿರುವ ಶ್ರೀ ನಂದೀಶ್ವರ ಸ್ವಾಮಿಯವರ ಜಾತ್ರ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಲಿದ್ದು, ನಾನು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಗಳ ಆಶೀರ್ವಾದ ಪಡೆಯುತ್ತೆನೆ ಎಂದು ಸಕಲೇಶಪುರ ಆಲೂರು ಕಟ್ಟಾಯ ವಿಧಾನ ಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾಧ್ಯಮಗಳಿಗೆ ತಿಳಿಸಿದ್ದಾರೆ.