ಹಾಸನ: ಶ್ರೀರಾಮನ ಜಯಂತಿ ವಿಶೇಷ ದಿನದ ಅಂಗವಾಗಿ ಎಲ್ಲೆಡೆ ರಾಮನ ಜಪ, ಭಜನೆ ಮಾಡಲಾಯಿತು. ಇನ್ನು ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ಹಾಗೂ ಪ್ರಸಾದ ರೂಪದಲ್ಲಿ ಅನ್ನದಾನ ನೆರವೇರಿಸಿದರು.
ನಗರದ ಪಾರ್ಕ್ ರಸ್ತೆ ಬಳಿ ಇರುವ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಕಳೆದ ಒಂದು ವಾರದಿಂದಲೂ ಶ್ರೀರಾಮನ ಪಟ್ಟಾಭಿಷೇಕ ಕಾರ್ಯಕ್ರಮ ಜರುಗಿ ಸಂಜೆ ವೇಳೆ ರಾಮನಿಗೆ ಸಂಬಂಧಿಸಿದ ಭಕ್ತಿ ಗೀತೆ, ಭಜನೆಗಳು ಜರುಗಿದವು. ಶ್ರೀರಾಮನವಮಿ ದಿನದಂದು ಬೆಳಗಿನಿಂದಲೇ ದೇವರಿಗೆ ವಿಶೇಷ ಪೂಜೆ, ಲೋಕಕಲ್ಯಾಣಕ್ಕಾಗಿ ಹೋಮಗಳು ಜರುಗಿದವು. ಬಂದ ಭಕ್ತರಿಗೆಲ್ಲಾ ಮಜ್ಜಿಗೆ, ಪಾನಕ, ಪುಳಿಯೋಗರೆಯನ್ನು ವಿತರಿಸಲಾಯಿತು.
ಹಾಸನದ ನಾನಾ ದೇವಾಲಯಗಳಲ್ಲಿಯೂ ಕೂಡ ವಿಶೇಷ ಪೂಜೆ, ಪ್ರಸಾದ ನೀಡಿದ್ರೆ, ಇನ್ನು ಕೆಲ ಶ್ರೀರಾಮನ ಭಕ್ತರು ಸಂಘದ ಮೂಲಕ ಮಜ್ಜಿಗೆ, ಪಾನಕ, ಕೋಸಂಬರಿ ಹಾಗೂ ಅನ್ನದಾನ ನೆರವೇರಿಸಿದರು. ಜಿಲ್ಲೆಯ ಚನ್ನರಾಯಪಟ್ಟಣದ ೪೮ ಅಡಿ ಆಂಜನೇಯ ದೇವಾಲಯದಲ್ಲೂ ವಿಶೇಷ ಅಲಂಕಾರದೊಂದಿಗೆ ವಿಜೃಂಭಣೆಯಿಂದ ರಾಮ ನವಮಿಯನ್ನು ಆಚರಿಸಲಾಯಿತು. ಬೆಳಗ್ಗೆಯಿಂದಲೇ ದೇವಾಲಯಕ್ಕೆ ಭಕ್ತರ ಆಗಮನ ಸಾಮಾನ್ಯವಾಗಿತ್ತು. ಅರಸೀಕೆರೆ, ಅರಕಲಗೂಡು, ಸಕಲೇಶಪುರ, ಆಲೂರಿನಲ್ಲೂ ರಾಮನವಮಿಯು ಶ್ರದ್ಧಾಭಕ್ತಿಯಿಂದ ಜರುಗಿತು.