ಅರಸೀಕೆರೆ: ಕೋಡಿಮಠ ಮಹದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸುಕ್ಷೇತ್ರ ಕೋಡಿಮಠದ ಪೀಠಾಧ್ಯಕ್ಷರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಬೆಳ್ಳಿ ಪಲ್ಲಕ್ಕಿ ಉತ್ಸವವು ಭಕ್ತರ ಶ್ರದ್ಧಾ ಭಕ್ತಿಯೊಂದಿಗೆ ವಿಜ್ರಂಭಣೆಯಿಂದ ಹಾರನಹಳ್ಳಿ ಗ್ರಾಮದಲ್ಲಿ ನಡೆಯಿತು.
ಮಾದೇಶ್ವರ ಜಾತ್ರಾಮಹೋತ್ಸವದ ಮೂರನೇ ದಿನ ಕೋಡಿಮಠದ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ನಡೆಯುವುದು ಸಂಪ್ರದಾಯ. ಅದರಂತೆ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಕೋಡಿ ಶ್ರೀಗಳು ವಿರಾಜಮಾನರಾಗಿ ಮಹಾರಾಜರು ಹಾಗೂ ಹೈದರಾಲಿ ನೀಡಿದ್ದ ಬಿರುದು ಬಾವಲಿಗಳಿಂದ, ಬಣ್ಣ-ಬಣ್ಣ ಹೂವುಗಳಿಂದ ಅಲಂಕೃತವಾದ ಬೆಳ್ಳಿ ಪಲ್ಲಕ್ಕಿ ಗ್ರಾಮದಲ್ಲಿ ವೈಭವದಿಂದ ನಡೆಯಿತು. ಉತ್ಸವದಲ್ಲಿ ಜಾನಪದ ಕಲಾ ಪ್ರಕಾರಗಳಾದ ವೀರಗಾಸೆ, ಕರಡೆ ಮಜಲು, ಕಹಳೆ ನಾದಸ್ವರ ವಾದ್ಯಗಳು ಈ ಉತ್ಸವಕ್ಕೆ ಮೆರಗು ನೀಡಿತು. ಗ್ರಾಮ ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದು, ಮನೆ ಮುಂಭಾಗದಲ್ಲಿ ರಂಗೋಲಿ ಚಿತ್ರಗಳು ಆಕರ್ಷ ಕವಾಗಿತ್ತು. ಹಾಗೆಯೇ ಸ್ವಾಮೀಜಿಯವರಿಗೆ ಗ್ರಾಮದ ಎಲ್ಲಾ ಸಮುದಾಯದ ಬಾಂಧವರು ಮನೆ ಮುಂದೆ ಹಾರ ಫಲ ಸಮರ್ಪಿಸಿ ಭಕ್ತರು ಗುರುಗಳಿಂದ ಆಶೀರ್ವಾದ ಪಡೆದರು.
ಪಲ್ಲಕ್ಕಿಯಲ್ಲಿ ಶ್ರೀಗಳು ಆಸೀನರಾಗಿದಾಗ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರೆ ಮನದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿ ಇರುವುದರಿಂದ ಕೋಡಿಮಠ ಶ್ರೀಗಳ ಪಲ್ಲಕ್ಕಿ ಉತ್ಸವಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಶ್ರೀ ಮಠದ ಭಕ್ತಸಮೂಹ.
ನಂತರ ಮಹದೇಶ್ವರ ಬೆಟ್ಟದಲ್ಲಿ ಗುಗ್ಗುಳ ಸೇವೆ, ಹೆಜ್ಜೆ ನಮಸ್ಕಾರ, ಮುತ್ತೈದೆ ಸೇವೆ ನಡೆದ ನಂತರ ಮಹಾ ದಾಸೋಹವನ್ನು ಏರ್ಪಡಿಸಲಾಗಿತ್ತು. ಬೇರೆ ಬೇರೆ ಊರುಗಳಿಂದ ಈ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಕೋಡಿಮಠದ ಉತ್ತರಾಧಿಕಾರಿಗಳಾದ ಚೇತನ ಮರಿದೇವರು ಉಪಸ್ಥಿತರಿದ್ದರು.