ಬೇಲೂರು: ವ್ಯಕ್ತಿಯನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲು ಮೂರು ಮಾರ್ಗಗಳಾದ ಕರ್ಮ, ಭಕ್ತಿ, ಜ್ಞಾನ ಸಾಧನ, ಪ್ರಜ್ಞಾ ಪೂರ್ವಕ ಅನುಸರಣೆ ಅಗತ್ಯತೆಯಿಂದ ಜೀವನದಲ್ಲಿ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯವಿದೆ. ಭಕ್ತಿ ಮತ್ತು ಕರ್ಮದಿಂದ ಜ್ಞಾನ ಪ್ರಾಪ್ತವಾಗುತ್ತದೆ. ಶಂಕರರು ಕೂಡ ಇದನ್ನೆ ನಾಡಿಗೆ ಸಂದೇಶ ನೀಡಿದ್ದಾರೆ ಎಂದು ಶೃಂಗೇರಿ ಶಾರದಾ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವೀಧು ಶೇಖರ ಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಪಟ್ಟಣದ ಶಂಕರ ಮಠದಲ್ಲಿ ನಡೆದ ಶ್ರೀ ಭಾರತಿ ತೀರ್ಥ ಸಭಾ ಭವನ ಉದ್ಘಾಟನೆ ಮತ್ತು ಮಹಾ ರುದ್ರಯಾಗ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು ದೇಹದಲ್ಲಿರುವ ಜೀವಾತ್ಮ ಪರಿಶುದ್ದವಾಗಲು ಮನಸ್ಸು, ಬುದ್ದಿ ಮತ್ತು ಆತ್ಮ ಶುದ್ದಿ ಆಗಬೇಕಿದೆ. ಕನ್ನಡಿಯ ಮೇಲಿನ ಧೂಳು ತೆಗೆದರೆ ಪ್ರತಿಬಿಂಬ ಕಾಣುವಂತೆ ಮನಸ್ಸಿನ ಕೊಳೆಯನ್ನು ಸ್ವಚ್ಚಗೊಳಿಸಲು ಕರ್ಮ ಅಗತ್ಯವಾಗಿದೆ. ಮನಸ್ಸಿನ ಚಂಚಲ ಬುದ್ಧಿಯೇ ವಿಕ್ಷೇಪ, ಇದನ್ನು ದೂರೀಕರಿಸಲು ಭಕ್ತಿ ಕೂಡ ಅಗತ್ಯವಾಗಿದೆ. ಕರ್ಮ ಮಾರ್ಗದಲ್ಲಿ ಭಕ್ತಿ ಮತ್ತು ಜ್ಞಾನವಿರುತ್ತದೆ. ಭಕ್ತಿ ಮಾರ್ಗದಲ್ಲಿ ಕರ್ಮ, ಜ್ಞಾನ ಮಿಳಿತವಾಗಿರುತ್ತದೆ. ಇವುಗಳು ಜೀವನದ ಪ್ರಮುಖ ಸಾಧನೆಗಳು ಎಂದ ಅವರು ನಮ್ಮ ಪ್ರಯತ್ನ ಸಫಲವಾಗಬೇಕೆಂದರೆ ಭಗವಂತನ ಅನುಗ್ರಹ ಮುಖ್ಯ. ಪ್ರತಿಯೊಬ್ಬರು ಧರ್ಮಾಚರಣೆಗೆ ಹೆಚ್ಚಿನ ಗಮನ ನೀಡಬೇಕಿದೆ. ಕೇವಲ ಲೌಕಿಕ ಮಾರ್ಗದಿಂದ ಮುಕ್ತಿಯನ್ನು ಪಡೆಯಲು ಯಾವ ಕಾರಣದಿಂದಲೂ ಸಾದ್ಯವಿಲ್ಲ. ಧಾರ್ಮಿಕ ಬದುಕು ಮನುಷ್ಯನ ಜೀವನವನ್ನು ಒಳಿತು ಮಾಡುತ್ತದೆ. ಶಂಕರರು ಕೂಡ ತಮ್ಮ ಸಂದೇಶಗಳಲ್ಲಿ ಒತ್ತಿ ಹೇಳಿದ್ದಾರೆ. ದಿನಪೂರ್ತಿ ಪೂಜೆಯಲ್ಲೇ ತೊಡಗಬೇಕಿಲ್ಲ. ಸ್ವಲ್ಪ ಸಮಯವಾದರೂ ಭಕ್ತಿ ಅಚಲವಾಗಿದ್ದರೆ ಖಂಡಿತ ಅಪಾರವಾದ ಫಲವನ್ನು ಪಡೆಯಲು ಸಾದ್ಯ. ಭಾರತ ಖಂಡದ ನಾಲ್ಕು ಮೂಲೆಯಲ್ಲಿ ಶಂಕರರು ನೆಲೆ ನಿಂತು ನೀಡಿದ ಉಪದೇಶವನ್ನು ಆಲಿಸಬೇಕಿದೆ ಎಂದು ತಿಳಿಸಿದರು.
ಶೃಂಗೇರಿಯ ಹಿಂದಿನ ಪೂಜ್ಯರು ಶಂಕರಮಠವನ್ನು ನಾಡಿನ ಬಹುತೇಕ ಕಡೆಯಲ್ಲಿ ಸ್ಥಾಪಿಸಿದ್ದಾರೆ. ಅಂತೆಯೇ ವಿಶ್ವ ಪ್ರಸಿದ್ದ ಬೇಲೂರಿನಲ್ಲಿ ಕೂಡ ಶಂಕರಮಠವನ್ನು ಸ್ಥಾಪಿಸಿ, ಮಾತಾ ಶಾರದಾ ಹಾಗೂ ಚಂದ್ರ ಮೌಳ್ವೇರರ ಮೂರ್ತಿಯನ್ನು ಜಗದ್ಗುರು ಸನ್ನಿದಾನದ ಅಮೃತ ಹಸ್ತದಿಂದ ಲೋಕಾರ್ಪಣೆಯಾಗಿದೆ. ಶೃಂಗೇರಿಯಲ್ಲಿ ನಡೆಯುವಂತೆ ಪೂಜಾ ಕಾರ್ಯಗಳು ಕೂಡ ಇಲ್ಲಿ ನಡೆಯುವ ಹಿನ್ನಲೆಯಲ್ಲಿ ಭಕ್ತರು ಇಲ್ಲಿಂದಲೇ ಪ್ರಾರ್ಥಿಸಬಹುದು. ಹಾಗೇಯೆ ಬೇಲೂರಿನ ಶಂಕರ ಮಠದ ಆಡಳಿತ ಮಂಡಳಿ ಹಾಗೂ ತಾಲೂಕು ಬ್ರಾಹ್ಮಣ ಸಮಾಜ ನಿಜಕ್ಕೂ ಅಗಮ್ಯವಾದ ಕೆಲಸವನ್ನು ಮಾಡಿದ್ದಾರೆ. ಪೂಜ್ಯ ಶ್ರೀ ಭಾರತೀತೀರ್ಥರ ಹೆಸರಿನಲ್ಲಿ ಸಭಾ ಭವನವನ್ನು ನಿರ್ಮಿಸಿದ್ದು ನಮಗೆ ಖುಷಿ ಮೂಡಿದೆ. ವಿಶೇಷವಾಗಿ ಲೋಕಾಕಲ್ಯಾಣಾರ್ಥವಾಗಿ ನಡೆದ ಮಹಾರುದ್ರಯಾಗ ಸೇರಿದಂತೆ ನಾನಾ ಪೂಜಾ ಕಾರ್ಯಗಳು ಕೂಡ ಸಂಪನ್ನಗೊಂಡಿದೆ. ಎಂ.ಎಸ್ ನಾಗೇಂದ್ರ ಪ್ರತಿಷ್ಠಾನ ಅಧ್ಯಕ್ಷರಾದ ಸಿದ್ದೇಶ್ ನಾಗೇಂದ್ರರವರ ಪೂರ್ಣ ಸಹಕಾರವನ್ನು ನೆನಪಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಎಸ್.ಲಿಂಗೇಶ್, ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ. ಗೌರಿಶಂಕರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಬಿಜೆಪಿ ಮುಖಂಡ ಸಿದ್ದೇಶ ನಾಗೇಂದ್ರ, ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿಜಯಕೇಶವ, ಶಂಕರ ಮಠದ ಅಧ್ಯಕ್ಷ ರವೀಂದ್ರ ಮತ್ತು ಕಾರ್ಯದರ್ಶಿ ಸುಬ್ರಮಣ್ಯ ಮುಂತಾದವರು ಹಾಜರಿದ್ದರು.
ಸಮಾರಂಭಕ್ಕೂ ಮುನ್ನ ಮಹಾ ರುದ್ರಯಾಗದ ಪೂರ್ಣಹುತಿಯನ್ನು ಸನ್ನಿದಾನಗಳು ನಡೆಸಿಕೊಟ್ಟರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಂಟೆತ್ತಡೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ, ಅರಸಿನಮಕ್ಕಿ ಇವರಿಂದ ದಕ್ಷಾದ್ವರ ಪ್ರಸಂಗ ಯಕ್ಷಗಾನ ನಡೆಸಿಕೊಟ್ಟರು.