ಸಕಲೇಶಪುರ: ತಾಲೂಕು ಕುರಬತ್ತೂರು ಗ್ರಾಮ ಪಂಚಾಯಿತಿ ಆದರಗೆರೆ ಹಾಗೂ ದೊಡ್ಡನಹಳ್ಳಿ ಗ್ರಾಮದ ಜಗನಹಳ್ಳಿ ಅಮ್ಮ, ಸುಗ್ಗಿಯಮ್ಮ, ಕನ್ನಂಬಾಡಿಯಮ್ಮ ಮತ್ತು ಕುಮಾರ ಲಿಂಗೇಶ್ವರ ದೇವರ ಸುಗ್ಗಿ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಬಾರದು, ಉತ್ತಮ ಮಳೆಯಾಗಿ ಗ್ರಾಮ ಸುಭೀಕ್ಷೆಯಿಂದಿರಬೇಕು, ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮ ದೇವರಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಕ್ಕೆ ಸುಗ್ಗಿ ಉತ್ಸವಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮಸ್ಥರು ಉತ್ಸಾಹದಿಂದ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಪುರಾತನ ಇತಿಹಾಸ ಇರುವ ಈ ದೇವಸ್ಥಾನಕ್ಕೆ ಹಿರಿಯರು ಹಿಂದೆಯಿಂದ ನಡೆಸಿಕೊಂಡು ಬಂದ ಈ ಸುಗ್ಗಿ ಹಬ್ಬದ ಸಂಪ್ರದಾಯದಂತೆ ಸುಗ್ಗಿಯು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯು ಸಂಪ್ರದಾಯದಂತೆ ಆದರಗೆರೆ ಹಾಗೂ ದೊಡ್ಡನಹಳ್ಳಿ ಗ್ರಾಮದ ಗ್ರಾಮಸ್ಥರು ಒಟ್ಟಿಗೆ ಸೇರಿ ಮೂರು ದಿನಗಳ ಕಾಲ ಜಗನಹಳ್ಳಿ ಅಮ್ಮ, ಸುಗ್ಗಿಯಮ್ಮ ಕನ್ನಂಬಾಡಿಯಮ್ಮ ಮತ್ತು ಕುಮಾರ ಲಿಂಗೇಶ್ವರ ದೇವರ ಸುಗ್ಗಿ ಮಹೋತ್ಸವ ನಡೆಸಲಾಯಿತು.
ಗುರುವಾರ ಮಲ್ಲುಸುಗ್ಗಿ, ಶುಕ್ರವಾರ ಸಂಜೆ ಹಾಗೂ ಶನಿವಾರ ಬೆಳಗ್ಗೆ ದೊಡ್ಡ ಸುಗ್ಗಿ, ಹಾಗೂ ಭಾನುವಾರ ಬೆಳಗ್ಗೆ ಕೆಂಡೋತ್ಸವ ಹಾಗೂ ದೇವರಿಗೆ ಹರಕೆ, ಹಣ್ಣುಕಾಯಿ ಕಾರ್ಯಕ್ರಮ ಮಾಡುವುದರೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶುಕ್ರವಾರ ರಾತ್ರಿ ಗ್ರಾಮದ ಪ್ರತಿ ಮನೆಯಿಂದ ತಂದಿದ್ದ ಹೂವುಗಳಿಂದ ಮಾಡಿದ ಬಿಲ್ಲು ಹಿಡಿದು ಗ್ರಾಮಸ್ಥರು ಸುಗ್ಗಿ ಕಟ್ಟೆಯಲ್ಲಿ ಸುಗ್ಗಿ ಕುಣಿಯುವುದರೊಂದಿಗೆ ಶನಿವಾರ ಬೆಳಗ್ಗೆ ಸಂಭ್ರಮ ಆಚರಿಸಿದರು.
ನೂರಾರು ಬಿಲ್ಲುಗಳನ್ನು ಹಿಡಿದು ಕುಣಿಯುವ ಸುಗ್ಗಿ ನೆರೆದಿದ್ದ ಭಕ್ತಾದಿಗಳನ್ನು ಖುಷಿಯ ಜೊತೆಗೆ ಭಕ್ತಿಯ ಕಡಲಲ್ಲಿ ತೆಳಿಸಿತ್ತು. ದೇವರ ವಿಶೇಷವಾದ ಕೆಂಡೋತ್ಸವ ಭಾನುವಾರ ಬೆಳಗ್ಗೆ ಸಂಪ್ರದಾಯದಂತೆ ವಿಶೇಷವಾಗಿ ನಡೆಸಲಾಯಿತು. ದೇವರಿಗೆ ಹರಕೆ ಹೊತ್ತವರು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ನಂತರ ದೇವರಿಗೆ ಹಣ್ಣು ಕಾಯಿ ಜೊತೆಗೆ ಹರಕೆ ತೀರಿಸುವ ಕಾರ್ಯಕ್ರಮಗಳು ಸಂಪ್ರದಾಯದಂತೆ ಮಾಡಲಾಯಿತು. ಗ್ರಾಮಸ್ಥರು ದೇವರ ದರ್ಶನ ಪಡೆದು ಪುನೀತರಾದರು.