ಬೇಲೂರು: ಲೋಕ ಕಲ್ಯಾಣಾರ್ಥಕ್ಕಾಗಿ ಮಹಾರುದ್ರಯಾಗ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವ ಸಮಾರಂಭ ಏರ್ಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹಳೇಬೀಡಿನಲ್ಲಿ ನಡೆಯಲಿರುವ ಲೋಕ ಕಲ್ಯಾಣಾರ್ಥಕವಾಗಿ ಮಹಾರುದ್ರಯಾಗ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಮಾ. ೨೬ರಿಂದ ೨೭ರವರೆಗೆ ಪಾರ್ವತಮ್ಮ ನಂಜೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ ೯ ಗಂಟೆಗೆ ದ್ವಾರಸಮುದ್ರ ಹಳೇಬೀಡು ದೊಡ್ಡಕೆರೆಯಿಂದ ವೀರಗಾಸೆ, ಮಂಗಳವಾದ್ಯದೊಂದಿಗೆ ಹಳೇಬೀಡು ರಾಜಬೀದಿಗಳಲ್ಲಿ ಗಂಗೆ ಪೂಜೆ, ಕಳಸ, ಕನ್ನಡಿ ವಾದ್ಯ ವೈಭವಗಳೊಂದಿಗೆ ಗಂಗೆಪೂಜೆ ಹಾಗೂ ಸಂಜೆ ಮಹಾರುದ್ರಯಾಗ ಪ್ರಾರಂಭ ಮಾಡಲಾಗುವುದು ಎಂದರು.
ಮಾ. ೨೭ರಂದು ಬ್ರಾಹ್ಮೀ ಮುಹೂರ್ತದಲ್ಲಿ ಉದಯಲಗ್ನ ಮತ್ತು ಮಹಾರುದ್ರಯಾಗ ಕಾರ್ಯಕ್ರಮ ಶುರುವಾಗಲಿದೆ. ಕಾರ್ಯಕ್ರಮದ ಪೌರೋಹಿತ್ಯವನ್ನು ಹಾಸನ ಜಿಲ್ಲೆ ಹಾಗೂ ಬೇಲೂರು ತಾಲೂಕಿನ ನುರಿತ ಪುರೋಹಿತರು ಮಹಾರುದ್ರಯಾಗದಲ್ಲಿ ಪೂಜಾ ವಿಧಿವಿಧಾನಗಳನ್ನು ಮಾಡಲಿದ್ದಾರೆ. ಅದೇ ರೀತಿಯಾಗಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದು ಪ್ರಸಾದ ವಿನಿಯೋಗ ಇದೆ. ತಾಲೂಕಿನ ಎಲ್ಲಾ ಭಕ್ತಾದಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ. ಕೆ. ಕುಮಾರ್ಪುರಸಭೆ ನಾಮಿನಿ ಸದಸ್ಯ ಪೈಂಟ್ ರವಿ, ಮಂಜುನಾಥ, ಉಮಾಶಂಕರ, ಬೇಲೂರು ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮೋಹನ ಹಾಜರಿದ್ದರು.