ಜಾವಗಲ್: ಹೋಬಳಿಯ ಕರಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಲ್ಲರಹಳ್ಳಿ ಗ್ರಾಮದಲ್ಲಿ ಆನೆ ಅಂಬಾರಿ ಉತ್ಸವ ಜರುಗಿತು. 6ನೇ ವರ್ಷದ ಪುರದಮ್ಮ ಹಾಗೂ ಹೋತನಕಲ್ಲಮ್ಮ ದೇವಿಗೆ ಆನೆ ಅಂಬಾರಿ ಉತ್ಸವಕ್ಕೆ ಕರಗುಂದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ದಯಾನಂದ ಗೊಲ್ಲರಹಳ್ಳಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ 6 ವರ್ಷದಿಂದ ಆನೆ ಅಂಬಾರಿ ಉತ್ಸವ ನಡೆಸುತ್ತಿದ್ದೆವೆ, ಗ್ರಾಮದಲ್ಲಿ ಮಳೆ ಬೆಳೆಯಾಗಿ ರೈತ ಸಮುದಾಯ ಅಭಿವೃದ್ಧಿ ಹೊಂದಬೇಕು. ಗ್ರಾಮದಲ್ಲಿ ಶಾಂತಿ ನೆಲೆಸಿ ಸೌಹಾರ್ದತೆಯಿಂದ ಜನರ ಬದುಕು ಸಾಗಬೇಕೆಂದು ಪ್ರತಿವರ್ಷ ಈ ಕಾರ್ಯಕ್ರಮ ರೂಪಿಸುತ್ತಿದ್ದೆವೆ. ಪುರದಮ್ಮ ಹಾಗೂ ಹೋತನಕಲ್ಲಮ್ಮ ದೇವಿಯನ್ನು ನಂಬಿ ನಡೆದರೆ ಎಲ್ಲರಿಗೂ ಯಶಸ್ಸು ಇಂತಹ ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ಸಹಕರಿಸಿದ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದರು.
ಕರಗುಂದ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೃತಿ ಮನು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಪ್ರತಿ ಹಳ್ಳಿಯಲ್ಲೂ ಜರುಗಬೇಕು. ಈ ದೇವತೆಗಳ ಅನುಗ್ರಹ ಈ ಭಾಗಕ್ಕೆ ತುಂಬಾ ಚೆನ್ನಾಗಿದೆ. ಮೈಸೂರಿನಲ್ಲಿ ದಸರಾ ನೋಡಿದಷ್ಟು ಸಂತೋಷವಾಗಿದೆ. ಈ ದೇವತೆಗಳ ಅನುಗ್ರಹದಿಂದ ಈ ಗ್ರಾಮದಲ್ಲಿ ಮಳೆ ಬೆಳೆ ಚೆನ್ನಾಗಿ ನಡೆದು ಸಾರ್ವಜನಿಕ ಜೀವನ ಸುಗಮವಾಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಹುಲ್ಲಳ್ಳಿ ಸುರೇಶ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ, ಮಸಾಲೆ ರಮೇಶ ಗ್ರಾಮಸ್ಥರಾದ ಶ್ರೀನಿವಾಸ, ಮನು, ಧನಂಜಯ, ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.