ಬೇಲೂರು: ಚನ್ನಕೇಶವಸ್ವಾಮಿಯ ಕಲ್ಯಾಣೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ಐತಿಹಾಸಿಕ ಚನ್ನಕೇಶವ ದೇವರ ಕಲ್ಯಾಣೋತ್ಸವ ದೇಗುಲದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆಯಿಂದ ನಡೆಯಿತು. ಚನ್ನಕೇಶವ ದೇವರಿಗೂ ಸೌಮ್ಯನಾಯಕಿ, ರಂಗನಾಯಕಿ ಅಮ್ಮನವರಿಗೂ ಇಲ್ಲಿ ಕಲ್ಯಾಣ ಭಾಗ್ಯವಿದೆ. ಇದು ಪ್ರತಿವರ್ಷ ರಥೋತ್ಸವಕ್ಕೆ ಮುನ್ನ ನಡೆಸಲಾಗುತ್ತದೆ. ಮಂಗಳವಾರ ವಿವಾಹೋತ್ಸವ ನಡೆಯಿತು.
ಕಲ್ಯಾಣವು ಗಂಡು, ಹೆಣ್ಣಿನ ಕಡೆಯ ಹಿರಿಯರು ಒಪ್ಪಿಕೊಂಡು ನಡೆಸುವ ಒಪ್ಪಂದದ ಮದುವೆಯಂತೆ ನಡೆಸಲಾಯಿತು. ವಿದ್ಯುತ್ ದೀಪವೆ ಇಲ್ಲದ ಅಂದಿನ ಕಾಲದಿಂದಲೂ ನಡೆದುಕೊಂಡ ಬಂದಂತಹ ಪದ್ಧತಿಯಲ್ಲೆ ಈಗಲೂ ವಿವಾಹ ಕಾರ್ಯಗಳೆಲ್ಲವೂ ಜರುಗಿಸಲಾಗಿದೆ. ದೇವರ ಕಲ್ಯಾಣದ ಪೂಜಾ ಕಾರ್ಯಗಳನ್ನು ರೋಹಿಣಿ ನಕ್ಷತ್ರದಲ್ಲಿ ಅರ್ಚಕ ಶ್ರೀನಿವಾಸಭಟ್ಟರ್, ನರಸಿಂಹ ಪ್ರೀಯ ಭಟ್ಟರ್ ತಂಡ ವೈಷ್ಣವ ಪದ್ಧತಿಯಲ್ಲಿ ನಡೆಸಿದರು. ಸುಮಂಗಲಿಯರು ವಿವಾಹ ಪೂರ್ವಸಿದ್ಧತೆಗಳಾದ ಗೋಧಿ ಕಲ್ಲು, ಅರಿಶಿನ ಕುಟ್ಟುವಿಕೆಯನ್ನು ಸಂಪ್ರದಾಯಿಕ ಹಾಡುಗಳೊಂದಿಗೆ ನಡೆಸಿದರು.
ದೇಗುಲದ ಒಳ ಆವರಣದಲ್ಲಿ ವರ ಮತ್ತು ವಧು ಕಡೆಯಿಂದ ಸಂಬಂಧಮಾಲೆ ನಡೆಸುತ್ತಾರೆ. ನಂತರ ದೇಗುಲದ ಕಲ್ಯಾಣ ಮಂಟಪದಲ್ಲಿ ದೇವರು ದೇವತೆಯರನ್ನು ವಧು ವರರಂತೆ ಶೃಂಗಾರ ಮಾಡಿ ಪ್ರತಿಷ್ಠಾಪಿಸಿ ವಿವಾಹ ಶಾಸ್ತ್ರಗಳನ್ನು ನಡೆಸಲಾಯಿತು. ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಚನ್ನಕೇಶವನಿಂದ ದೇವಿಯವರಿಗೆ ಮಾಂಗಲ್ಯ ಧಾರಣೆ ಜರುಗಿತು. ಆಗಮಿಸಿದವರಿಗೆಲ್ಲ ದಾಸೋಹ ಭವನದಲ್ಲಿ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು. ಭಕ್ತ ಎ. ಲಕ್ಷ್ಮೀನರಸಿಂಹನ್ ಮತ್ತು ಮಕ್ಕಳು ವಿಜೃಂಭಣೆಯಿಂದ ಜರುಗಿದ ಕಲ್ಯಾಣೋತ್ಸವಕ್ಕೆ ೧ ಲಕ್ಷ ರೂ. ಪುಡವಟ್ಟು ಇಟ್ಟಿದ್ದರು.
ಕಲ್ಯಾಣೋತ್ಸವದಲ್ಲಿ ತಹಸೀಲ್ದಾರ ಎ.ಮಮತಾ, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಆರ್. ವಿದ್ಯುಲ್ಲತಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಆರ್. ನಾರಾಯಣಸ್ವಾಮಿ, ಸದಸ್ಯರಾದ ಬಿ.ಆರ್. ಪ್ರಮೋದ್, ಹೆಚ್.ಆರ್ ರವಿಶಂಕರ್, ಜಿ.ಕೆ.ರವೀಂದ್ರ, ಹೆಚ್.ಎಸ್. ಮೋಹನ್ ಕುಮಾರ್, ಬಿ.ಎನ್.ವಿಜಯಲಕ್ಷ್ಮಿ ಸೇರಿದಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ಭಕ್ತರು ಪಾಲ್ಗೊಂಡು ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.