ಬೇಲೂರು: ಚನ್ನಕೇಶವಸ್ವಾಮಿಯ ನಾಡ ರಥೋತ್ಸವ ಇಂದು ಜನ ಸಾಗರದ ನಡುವೆ ನಡೆಯಿತು. ಮಂಗಳವಾರ ರಥವನ್ನು ಈಶಾನ್ಯ ಮೂಲೆಯಿಂದ ಆಗ್ನೇಯ ಮೂಲೆಗೆ ಎಳೆದು ನಿಲ್ಲಿಸಲಾಗಿತ್ತು. ಇಂದು ದೇವಾಲಯದ ಉಳಿದ ಮೂರು ದಿಕ್ಕಿನ ಬೀದಿಗಳಲ್ಲಿ ರಥ ಎಳೆದು ಸ್ವಸ್ಥಾನದಲ್ಲಿ ನಿಲ್ಲಿಸಲಾಯಿತು.
ನಾಡ ಪಟೇಲರು ರಥಕ್ಕೆ ಮಧ್ಯಾಹ್ನ 2.50ಕ್ಕೆ ಪೂಜೆ ಸಲ್ಲಿಸಿದ ನಂತರ ನೆರೆದಿದ್ದವರು ರಥ ಎಳೆದರು. ದವನ ಚುಚ್ಚಿದ ಬಾಳೆಹಣ್ಣು ಎಸೆದರು. ಮೊದಲ ದಿನದ ರಥೋತ್ಸವದ ಸಂದರ್ಭದಲ್ಲಿ ಪಟ್ಟಣದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ, ಇಂದು ಗ್ರಾಮೀಣ ಪ್ರದೇಶದ ಜನರು ಭಾಗವಹಿಸಿದ್ದರು. ನಾಡಗೌಡರನ್ನು ವಿಷ್ಣುಸಮುದ್ರ ಕೆರೆ ಬಳಿಯಿಂದ ಗೌರವಾಥಿತ್ಯ ನೀಡಿ, ದೇಗುಲ ಕಾರ್ಯ ನಿರ್ವಾಹಣಾಧಿಕಾರಿ ಆರ್.ವಿದ್ಯುಲ್ಲತಾ ಹಾಗೂ ವ್ಯವಸ್ಥಾಪನಾ ಸಮಿತಿ ಮತ್ತು ಸಿಬ್ಬಂದಿಗಳು ಪ್ರತಿ ವರ್ಷದಂತೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ವಿವಿಧ ಕಲಾ ತಂಡಗಳ ಮೂಲಕ ಕರೆ ತಂದರು.
ನಾಡಗೌಡರು ಹೂವು ಮಾಲೆಗಳನ್ನು ರಥಕ್ಕೆ ಅರ್ಪಿಸಿದರು. ನಂತರ ನಾಡಗೌಡರ ಸಮ್ಮುಖದಲ್ಲಿ ದೇವರಿಗೆ ಪೂಜೆ ನೆರವೇರಿಸಿ ರಥ ಎಳೆಯಲಾಯಿತು. ಇಂದು ನಡೆದ ರಥೋತ್ಸವದಲ್ಲಿ ನೆನ್ನೆಗಿಂತ ಭಕ್ತರ ಸಂಖ್ಯೆ ಎರಡು ಮೂರು ಪಟ್ಟು ಹೆಚ್ಚಾಗಿತ್ತು. ಬೆಳಗಿನಿಂದಲೇ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ತಾಲೂಕಿನ ಸುತ್ತಮುತ್ತಲಿನ ಭಕ್ತರು ಜಮಾಯಿಸತೊಡಗಿದರು. ದೇಗುಲದ ಸುತ್ತಮುತ್ತ ಹಾಗೂ ದೇವಸ್ಥಾನ ರಸ್ತೆಯಲ್ಲಿ ಸೂಜಿ ಬಿದ್ದರೂ ಕಾಣದಷ್ಟು ಜನ ಸಮೂಹ ನೆರೆದಿತ್ತು.
ಒಂದು ತುದಿಯಿಂದ ಮತ್ತೊಂದು ತುದಿಗೆ ದಾಟಲು ಹರಸಾಹಸ ಪಡಬೇಕಾಗಿತ್ತು. ಮುಖ್ಯ ರಸ್ತೆ ಹಾಗೂ ಹೆದ್ದಾರಿ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಟ್ಟಣದಲ್ಲಿಂದು ಜನಸಾಗರದ ಜತೆಗೆ ವಾಹನಗಳು ಅಧಿಕ ಸಂಖ್ಯೆಯಲ್ಲಿದ್ದವು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸಿಪಿಐ ರವಿಕಿರಣ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದುಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಥೋತ್ಸವದ ನಂತರ ಶಾಂತಿ ಉತ್ಸವ ನಡೆಯಿತು. ಗಂಧ, ಅರಿಸಿನ, ಸುಣ್ಣ, ಕರ್ಪೂರ, ಕಚೋರ, ಕೇಸರಿ ಮತ್ತು ಏಲಕ್ಕಿ ಬೆರೆಸಿದ ನೀರನ್ನು ಉತ್ಸವಮೂರ್ತಿ, ದೇವಾಲಯ, ಉಪ ದೇವಾಲಯ, ಪ್ರಕಾರ, ರಥಬೀದಿ ಮತ್ತು ನೆರೆದ ಜನರ ಮೇಲೆ ಪ್ರೋಕ್ಷಣೆ ಮಾಡಲಾಯಿತು.
ಪ್ರಸಾದ ವಿನಿಯೋಗ: ಕಳೆದ 25 ವರ್ಷದಿಂದ ಭಕ್ತರಿಗೆ ಪ್ರಸಾದ ವಿತರಿಸಿಕೊಂಡು ಬರುತ್ತಿದ್ದ ಅಡುಗೆ ಕಂಟ್ರಾಕ್ಟರ್ ನಂದಕುಮಾರ್ ಈ ವರ್ಷವೂ 250 ಕೆ.ಜಿ.ಅಕ್ಕಿಯ ಮೊಸರನ್ನ, 75 ಕೆ.ಜಿ. ಅಕ್ಕಿಯ ಪೊಂಗಲು ಮಾಡಿ ವಿತರಿಸಿದರು. ದೇಗುಲದ ವತಿಯಿಂದ 3 ಕ್ವಿಂಟಲ್ ಪುಳಿಯೋಗರೆ, 2 ಕ್ವಿಂಟಲ್ ಮೊಸರನ್ನ ವಿತರಿಸಿದರು. ಬೆಳ್ಳಗೆಯಿಂದಲ್ಲೆ ಸಂಘ ಸಂಸ್ಥೆಗಳಿಂದ ಪಾನಕ, ಮಜ್ಜಿಗೆ, ಪ್ರಸಾದ ವಿತರಿಸಿದರು. ರಥ ಸ್ವಸ್ಥಾನಕ್ಕೆ ಬಂದು ನಿಂತ ಮೇಲೆ ನಾಡ ಪಟೇಲರಿಗೆ ಇನ್ನಿತರ ಗಣ್ಯರಿಗೆ, ಪ್ರಮುಖರಿಗೆ ಗೌರವ ಸಮರ್ಪಿಸಲಾಯಿತು.
ಪುರಸಭೆಯೊಂದಿಗೆ ರಾಘವೇಂದ್ರ ಯೋಗಾ ಕೇಂದ್ರದ ಸದಸ್ಯರು ದೇಗುಲ ರಸ್ತೆ, ರಥಬೀದಿ ಹಾಗೂ ಅಂಗಡಿ ಮುಂಗಟ್ಟುಗಳ ಬಳಿ ಬಿದ್ದಿದ್ದ ತ್ಯಾಜ್ಯವನ್ನು ತೆಗೆದರು. ತಹಶೀಲ್ದಾರ ಎಂ.ಮಮತಾ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಆರ್.ವಿದ್ಯುಲ್ಲತಾ, ದೇಗುಲ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಹಾಗೂ ಸದಸ್ಯರು, ಪೊಲೀಸ್ ಇಲಾಖೆ, ಪುರಸಭೆ, ಸೆಸ್ಕ್ ಸಿಬ್ಬಂದಿ ಪಾಲ್ಗೊಂಡಿದ್ದರು. ಚನ್ನಕೇಶವಸ್ವಾಮಿಯ ತೆಪ್ಪೋತ್ಸವ ನಾಳೆ (ಗುರುವಾರ) ಸಂಜೆ 8 ಗಂಟೆಗೆ ವಿಷ್ಣುಸಮುದ್ರ (ಬಿಷ್ಟಮ್ಮನ ಕೆರೆ) ಕೆರೆಯಲ್ಲಿ ನಡೆಯಲಿದೆ.