ಸಕಲೇಶಪುರ: ತಾಲೂಕು ಯಸಳೂರು ಹೋಬಳಿಯ ಅತ್ತಿಗನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ದವಾದ ಶ್ರೀ ದೇವಿರಮ್ಮ ಅವರ ವರ್ಷಕೊಮ್ಮೆ ಚ್ರೈತ್ರಮಾಸ, ಶುಕ್ಲ ಪಕ್ಷದಲ್ಲಿ ನಡೆಯುವ ಸುಗ್ಗಿ ಉತ್ಸವವೂ, ಭಕ್ತಿ ಪೂರ್ವಕವಾಗಿ ಹಾಗೂ ಅದ್ದೂರಿಯಾಗಿ 9 ದಿನಗಳ ಕಾಲ ಆಚರಿಸಲಾಯಿತು.
ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಬಾರದು, ಉತ್ತಮ ಮಳೆಯಾಗಿ ಗ್ರಾಮ ಸುಭೀಕ್ಷೆಯಿಂದಿರಬೇಕು, ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮ ದೇವರಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಕ್ಕೆ ಸುಗ್ಗಿ ಉತ್ಸವಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮಸ್ಥರು ಉತ್ಸಾಹದಿಂದ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಪುರಾತನ ಇತಿಹಾಸ ಇರುವ ಈ ದೇವಸ್ಥಾನಕ್ಕೆ ಹಿರಿಯರು ಹಿಂದೆಯಿಂದ ನಡೆಸಿಕೊಂಡು ಬಂದ ಈ ಸುಗ್ಗಿ ಹಬ್ಬದ ಸಂಪ್ರದಾಯದಂತೆ ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯು ಸಂಪ್ರದಾಯದಂತೆ ಅತ್ತಿಗನಹಳ್ಳಿಯಲ್ಲಿ ಗ್ರಾಮಸ್ಥರು ಹಾಗೂ ಸಂಪ್ರದಾಯದಂತೆ 7 ಊರಿನ ಗ್ರಾಮಸ್ಥರು ಸೇರಿ ಸುಗ್ಗಿ ಮಹೋತ್ಸವ ಅದ್ದೂರಿಯಾಗಿ ನಡೆಸಲಾಯಿತು.
ಗ್ರಾಮದಲ್ಲಿ ಹಬ್ಬದ ವಾತಾವರಣಕ್ಕೆ ಕಳೆಕಟ್ಟಿತು. ಅದರ ಪ್ರಕಾರ ಗ್ರಾಮಸ್ಥರು “ಹಸಿ ಕಡಿಬೇಡ, ಒಣಗು ಮುರಿಯಬೇಡ, ಭತ್ತವ ಕುಟ್ಟಬೇಡ, ಮೇಟಿಯ ಹಿಡಿಯಬೇಡ, ಘಾಟು ಒಗ್ಗರಣೆ ಮಾಡಬೇಡ, ಬೇಟೆ ಅಡಬೇಡ, ಊರ ಹೊರಗಿದ್ದವರು ಹೊರಗೆ, ಊರ ಒಳಗೆ ಇದ್ದವರು ಒಳಗೆ, ಪಾದರಕ್ಷೆ ದರಿಸಬೇಡ, ಬೆಂಗಾಲಲ್ಲಿ ನೆಡೆ, ಎಂಬ ದೇವರ ಕಟ್ಟು ನಿಟ್ಟಿನ ಆಚರಣೆಯೊಂದಿಗೆ ಸಾರುವ ಸುಗ್ಗಿ ಉತ್ಸವ, ಹೊನ್ನಾರು ಸುಗ್ಗಿ ಮಾಡುವುದರೊಂದಿಗೆ ಸಿರಿ ಧಾನ್ಯಗಳನ್ನು ಸಂಪ್ರಾದಾಯದಂತೆ ಬಿತ್ತುವ ಮೂಲಕ ಆಚರಿಸಿದರು.
ದೊಡ್ಡ ಸುಗ್ಗಿ ಮೂಲಕ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಸೇರಿ ಸುಗ್ಗಿ ಕುಣಿತ, ಕೋಲಾಟ, ಹೊನ್ನರು ಹಾಡು, ಸಂಪ್ರದಾಯ, ಸೇರಿದಂತೆ ಸುಗ್ಗಿ ಕುಣಿತ ನೋಡುಗರನ್ನು ಖುಷಿಯನ್ನು ತಂದುಕೊಟ್ಟಿದ್ದು, ಭಾನುವಾರ ಮಡೇಬನದಲ್ಲಿ ಮಡಿವಂತಿಕೆಯಿಂದ ದೇವರಿಗೆ ಮಡೇ ನಡೆಯುತ್ತದೆ. ರೊಟ್ಟಿ ಮತ್ತು ಕಿಚಡಿ ಮಡೇ ಪ್ರಸಾದವಾಗಿ ಕೊಡಲಾಗುವುದು.ಈ ಪ್ರಸಾದಕ್ಕೆ ತನ್ನದೇ ಆದಂತಹ ವಿಶೇಷತೆ ಇದೆ. ಇದಕ್ಕಾಗಿಯೇ ಹೊರಗಿನಿಂದ ತುಂಬಾ ಭಕ್ತಾದಿಗಳು ಬಂದು ಪ್ರಸಾದ ಸೇವಿಸುತ್ತಾರೆ. ನಂತರ ಹಗಲು ಸುಗ್ಗಿ ನೆರೆದಿದ್ದ ಭಕ್ತಾದಿಗಳನ್ನು ಹಾಗೂ ಗ್ರಾಮಸ್ಥರನ್ನು ಖುಷಿಯ ಜೊತೆ ಭಕ್ತಿಯ ಕಡಲಲ್ಲಿ ತೇಲಿಸಿತ್ತು. ದೇವರಿಗೆ ಹಣ್ಣು ಕಾಯಿ ಜೊತೆಗೆ ಹರಕೆ ತೀರಿಸುವ ಕಾರ್ಯಕ್ರಮಗಳು ಸಂಪ್ರದಾಯದಂತೆ ನೆಡೆದು ಅದ್ದೂರಿ ಸುದ್ದಿಗೆ ಸಾಕ್ಷಿಯಾಯಿತು. ಈ ಇತಿಹಾಸ ಪ್ರಸಿದ್ಧ ಅತ್ತಿಗೆನಳ್ಳಿ ಶ್ರಿ ದೇವಿರಮ್ಮ ಸುಗ್ಗಿ ಉತ್ಸವವನ್ನು ಹಿಂದೆಯಿಂದ ಕಪ್ಪಣ್ಣ ಗೌಡರ ಕುಟುಂಬಸ್ಥರು ಶಾಸ್ತ್ರೋಕ್ತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದು ದೇವರ ದರ್ಶನ ಪಡೆದು ಪುನೀತರಾದರು.