ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಆದಿಚುಂಚನಗಿರಿ ಶಾಖಾಮಠದ ಆದಿಹಳ್ಳಿ ಆದಿಲಕ್ಷ್ಮಿ ಅಮ್ಮನವರ ಜಾತ್ರಾ ಮಹೋತ್ಸವವು ಮಾರ್ಚ್ ೩೧ರಿಂದ ಏಪ್ರಿಲ್ ೨ರವರೆಗೆ ಸಾಂಪ್ರದಾಯದಂತೆ ಜರುಗಲಿದೆ ಎಂದು ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ಮಾರ್ಚ್ ೩೧ರ ಮುಂಜಾನೆ ಆದಿಲಕ್ಷ್ಮಿ ಅಮ್ಮನವರ ಮೂಲ ವಿಗ್ರಹಕ್ಕೆ ಫಲ ಪಂಚಾಮೃತ ಅಭಿಷೇಕದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ನಂತರ ದೇವಾಲಯದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯದಂತೆ ವಿಧಿವತ್ತಾಗಿ ಜರುಗಲಿದೆ. ಸಂಜೆ ಮಂಗಳವಾದ್ಯ ಸಮೇತ ನಾನಾ ಜಾನಪದ ಕಲಾತಂಡಗಳ ಕಲಾ ಪ್ರದರ್ಶನದೊಂದಿಗೆ ಅಮ್ಮನವರ ಬೆಳ್ಳಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗಲಿದೆ ಎಂದರು.
ಏಪ್ರಿಲ್ ಒಂದರಂದು ಮಧ್ಯಾನ ಮೂರು ಗಂಟೆಗೆ ಅಮ್ಮನವರ ಬ್ರಹ್ಮರಥೋತ್ಸವವು ನಡೆದರೆ ಸಂಜೆ ಮಠದ ಅಂಗಳದಲ್ಲಿ ನಡೆಯುವ ಬೃಹತ್ ಧಾರ್ಮಿಕ ಸಮಾರಂಭದ ಸಾನಿಧ್ಯ ವಯಸ್ಸಲ್ಲಿರುವ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಭಕ್ತರಿಗೆ ಆಶೀರ್ವಚನ ನೀಡಲಿದ್ದು, ಭಕ್ತವೃಂದ ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಗ್ರಾಮ ದೇವತೆ ಹಾಗೂ ಪೂಜ್ಯ ಗುರುಗಳ ಆಶೀರ್ವಾದ ಪಡೆಯುವಂತೆ ಕರೆ ನೀಡಿದರು.
ಮಹಾ ರಥೋತ್ಸವ: ಏಪ್ರಿಲ್ ೨ ಬೆಳಗ್ಗೆ ೧೦ ಗಂಟೆಗೆ ಅಮ್ಮನವರ ಮಹಾ ರಥೋತ್ಸವವು ಜರುಗಲಿದ್ದು, ಸುತ್ತಮುತ್ತ ಗ್ರಾಮಗಳ ಗ್ರಾಮದೇವತೆಗಳು ಹಾಗೂ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೂರು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಶ್ರೀಮಠದ ವತಿಯಿಂದ ದಾಸೋಹದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಆದಿಹಳ್ಳಿ ಶಾಖ ಮಠದ ಶಿವಪುತ್ರನಾಥ ಸ್ವಾಮೀಜಿ ಉಪಸ್ಥಿತರಿದ್ದರು.