ಅರಕಲಗೂಡು: ಶಾಸಕ ಸ್ಥಾನಕ್ಕೆ ಎ.ಟಿ.ರಾಮಸ್ವಾಮಿ ರಾಜೀನಾಮೆ ಜನರನ್ನು ದಿಕ್ಕು ತಪ್ಪಿಸುವ ನಾಟಕದ ತಂತ್ರ ಎಂದು ಹೆಚ್.ಯೋಗಾರಮೇಶ್ ಖಂಡಿಸಿದ್ದಾರೆ.
ಎ.ಟಿ.ರಾಮಸ್ವಾಮಿ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಐದು ವರ್ಷಗಳೇ ಕಳೆದಿವೆ. ಈ ಐದು ವರ್ಷಗಳಲ್ಲಿ ಆ ಪಕ್ಷದ ಕಾರ್ಯಕರ್ತರು ಹಾಗೂ ಜೆಡಿಎಸ್ ಪಕ್ಷದ ವರಿಷ್ಠರ ವಿಶ್ವಾಸ ಕಳೆದುಕೊಂಡು ಜೆಡಿಎಸ್ ಪಕ್ಷದಿಂದ ಹೊರದಬ್ಬಿಸಿಕೊಂಡಿದ್ದಾರೆ. ಅರಕಲಗೂಡು ಕ್ಷೇತ್ರದಲ್ಲಿ ಎ.ಟಿ.ರಾಮಸ್ವಾಮಿ ಅವಧಿಯಲ್ಲಿ ಆಗಿರುವ ಕೆಲಸಗಳು ಎ.ಟಿ.ರಾಮಸ್ವಾಮಿ ಕೆಲಸಗಳಲ್ಲ. ಬದಲಾಗಿ ಭಾರತೀಯ ಜನತಾ ಪಾರ್ಟಿ ಪಕ್ಷಾತೀತವಾಗಿ ನೀಡಿದ ಅನುದಾನದಿಂದ ಅರಕಲಗೂಡು ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿದೆ. ಇದರ ಕ್ರೆಡಿಟ್ ಬಿಜೆಪಿ ಸರ್ಕಾರಕ್ಕೆ ಹೊರತು ಎ.ಟಿ.ರಾಮಸ್ವಾಮಿಗೆ ಅಲ್ಲ. ಜೆಡಿಎಸ್ ಸರ್ಕಾರ ಇದ್ದಾಗ ಅರಕಲಗೂಡು ಕ್ಷೇತ್ರಕ್ಕೆ ಬಿಡಿಗಾಸೂ ಬರುತ್ತಿರಲಿಲ್ಲ. ಅನುದಾನವೆಲ್ಲ ಪಕ್ಕದ ಹೆಚ್.ಡಿ.ರೇವಣ್ಣ ಅವರ ಕ್ಷೇತ್ರ ಹೊಳೆನರಸೀಪುರದ ಪಾಲಾಗುತ್ತಿತ್ತು. ಆ ಸಂದರ್ಭದಲ್ಲಿ ಎ.ಟಿ.ರಾಮಸ್ವಾಮಿ ಮೂಕ ಪ್ರೇಕ್ಷಕರಾಗಿ ಜೆ.ಡಿ.ಎಸ್ ನಾಯಕರ ಮುಂದೆ ಕೈ ಕಟ್ಟಿ ಕುಳಿತಿದ್ದರು.
ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಬೇಡ ಎಂದಿದ್ದೆ, ಅದಕ್ಕೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಅವಮಾನ ಮಾಡಿ ಜೆಡಿಎಸ್ ಪಕ್ಷದಿಂದ ಹೊರ ಹಾಕಿದ್ದಾರೆ ಎಂದು ಹೇಳುತ್ತಿದ್ದೀರಲ್ಲ? ನಿಮಗೆ ಅವಮಾನ ಆಗಿದ್ದರೆ ಈಗ ಕೊಡುವ ರಾಜೀನಾಮೆಯನ್ನೇ ಅಂದೇ ಜಿಡಿಎಸ್ ನಾಯಕರ ನಿರ್ಧಾರ ಪ್ರತಿಭಟಿಸಿ, ರಾಜೀನಾಮೆ ನೀಡಿದ್ದರೆ ಒಂದು ಅರ್ಥ ಇರುತ್ತಿತ್ತು. ಐದು ವರ್ಷಗಳಲ್ಲಿ ನೀವು ಹಾಗೂ ನಿಮ್ಮ ಮಕ್ಕಳು ಸೇರಿಕೊಂಡು ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಈಡೀ ಕ್ಷೇತ್ರದ ಜನ ನೋಡಿದ್ದಾರೆಂದು ಯೋಗಾ ರಮೇಶ್ ವ್ಯಂಗ್ಯವಾಡಿದ್ದಾರೆ.
ನೀವು ಜೆಡಿಎಸ್ ಪಕ್ಷದಿಂದ ಹೊರ ದಬ್ಬಿಸಿಕೊಂಡ ಮೇಲೆ ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ ಎಂದು ನೀವು ಕಾಂಗ್ರೆಸ್ ಪಕ್ಷದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ದೆಹಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಬಳಿ ಹೋಗಿ ಅಲೆದು ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಎಲ್ಲೆಡೆ ತಿರಸ್ಕಾರ ಆದ ನೀವು ಈಗ ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ನೀವು ಕೊಡುತ್ತಿರುವ ರಾಜೀನಾಮೆಗೆ ಯಾವುದೇ ಅರ್ಥ ಇಲ್ಲ. ನಿಮ್ಮ ಶಾಸಕ ಅವಧಿ ಇನ್ನೂ ಒಂದು, ಎರಡು ಅಥವಾ ಮೂರು ವರ್ಷಗಳು ಇದ್ದಾಗ ಈ ಕ್ಷೇತ್ರದ ಅಭಿವೃದ್ಧಿಗೆ ಅನ್ಯಾಯ ಆದಾಗ ಅಥವಾ ಮತದಾರರಿಗೆ ಅನ್ಯಾಯ ಆದಾಗ ಅಥವಾ ನಿಮಗೆ ಜೆಡಿಎಸ್ ನಾಯಕರಿಂದ ಅವಮಾನ ಆದಾಗ ಜನರ ಹಿತದೃಷ್ಟಿಯಿಂದ ಆ ಅನ್ಯಾಯವನ್ನು ಬಹಿರಂಗವಾಗಿ ತಿಳಿಸಿ ಈ ಹಿಂದೆಯೇ ರಾಜೀನಾಮೆ ನೀಡಿದ್ದರೆ ಜನರು ನಂಬುತ್ತಿದ್ದರು.
ಚುನಾವಣೆ ನೀತಿಸಂಹಿತೆ ಜಾರಿಯಾದ ಮೇಲೆ ಈಗ ಶಾಸಕ ಸ್ಥಾನಕ್ಕೆ ಯಾವುದೇ ಅಧಿಕಾರ ಇಲ್ಲ. ಈಗ ನೀಡಿರುವ ರಾಜೀನಾಮೆ ನಿಮ್ಮ ಪ್ರಚಾರ ಹಾಗೂ ಜನರನ್ನು ದಿಕ್ಕು ತಪ್ಪಿಸುವ ತಂತ್ರವೇ ಹೊರತು ಕ್ಷೇತ್ರದ ಜನರ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ಅಲ್ಲ. ಎ.ಟಿ. ರಾಮಸ್ವಾಮಿ ಅವರೆ ಈ ರಾಜೀನಾಮೆ ನಾಟಕವನ್ನು ಕ್ಷೇತ್ರದ ಜನರು ನಂಬುವುದಿಲ್ಲ. ಈ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆಂದು ಯೋಗಾರಮೇಶ್ ಎಚ್ಚರಿಸಿದ್ದಾರೆ.