ಹಾಸನ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಪ್ರೀತಂ ಜೆ ಗೌಡ ಪರ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ನಗರದಲ್ಲಿ ಬೃಹತ್ ಬೈಕ್ ರ್‍ಯಾಲಿ ಹಾಗೂ ರೋಡ್ ಶೋ ನಡೆಸಿದರು.
ಹಾಸನ ನಗರ ಸಮೀಪ ಭುವನಹಳ್ಳಿ ಹೆಲಿಪ್ಯಾಡ್ ಗೆ ಆಗಮಿಸಿ ನಂತರ ಅಲ್ಲಿಂದ ನೂರಾರು ಸಂಖ್ಯೆಯ ಬೈಕ್ ನೊಂದಿಗೆ ರ‍್ಯಾಲಿ ನಡೆಸಿದ ವಿಜಯೇಂದ್ರ ಅವರು ಡೈರಿ ವೃತ್ತ, ಎನ್‌ಆರ್ ಸರ್ಕಲ್, ಸಂತೆಪೇಟೆ ವೃತ್ತ ಸಂಚರಿಸಿ ವಲ್ಲಭಾಯಿ ರಸ್ತೆ, ಗಾಂಧಿ ಬಜಾರ್ ಕೆಇಬಿ ರಸ್ತೆ, ಮಹಾವೀರ ವೃತ್ತದವರೆಗೂ ರೋಡ್ ಶೋ ನಡೆಸಿದರು.
ಮಹಾವೀರ ವೃತ್ತದಲ್ಲಿ ರೋ ಡ್ ಶೋ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಬಿ.ವೈ ವಿಜಯೇಂದ್ರ ಅವರು ಹಾಸನ ನಗರದಲ್ಲಿ ಅಭಿವೃದ್ಧಿ ಪೂರಕ ವಾತಾವರಣ ನಿರ್ಮಾಣ ಮಾಡಿರುವ ಶಾಸಕ ಪ್ರೀತಂ ಜೆ ಗೌಡರಿಗೆ ಮತ್ತೆ ಅವಕಾಶ ಕೊಡುವಂತೆ ಮನವಿ ಮಾಡಿದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ ೮೦ರಷ್ಟು ಜನ ನಗರದಲ್ಲಿ ಆಗಿರುವ ಅಭಿವೃದ್ಧಿಯನ್ನು ನೋಡಿ ಮತ ನೀಡುತ್ತಾರೆ ಎಂದು ಹೇಳಿದರು.
ಚುನಾವಣಾ ಪ್ರಚಾರದ ವೇಳೆ ವಿರೋಧ ಪಕ್ಷದ ದೊಡ್ಡ ದೊಡ್ಡ ನಾಯಕರು ಪ್ರೀತಂ ಜೆ ಗೌಡರನ್ನು ತೆಗೆಯುವ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿಸಿದ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕಾರ್ಯಕ್ರಮಕ್ಕೆ ಹಾಸನ ನಗರದಲ್ಲಿ ಜನ ಸೇರುವುದಿಲ್ಲ, ಜನರು ಸೇರದ ಕಾರಣ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಮತಯಾಚನೆ ಮಾಡಲು ಪೆನ್ಷನ್ ಮೊಹಲ್ಲಾ ಬಡಾವಣೆಗೆ ಕಳುಹಿಸಿದ್ದರು ಎಂದು ಹೇಳಿದರು.
ಶಾಸಕ ಪ್ರೀತಂ ಜೆ ಗೌಡ ಅವರು ಮಾತನಾಡಿ ಕೋವಿಡ್ 19 ಆತಂಕದ ಸಮಯದಲ್ಲಿ ಜನರ ನಡುವೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ, ಜನರ ಕಷ್ಟ ಸುಖಗಳಿಗೆ ಭಾಗಿಯಾಗಿದ್ದೇನೆ. ಸಾವಿರಾರು ಜನರಿಗೆ ಫುಡ್ ಕಿಟ್ ಹಾಗೂ ನೆರವಿನ ಹಸ್ತ ಚಾಚಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಜನರು ನನಗೆ ಆಶೀರ್ವಾದ ಮಾಡುವ ಸಂಪೂರ್ಣ ನಂಬಿಕೆ ಇದೆ ಎಂದರು.
ನಾನು ಒಂದು ಗಂಟೆ ರ್‍ಯಾಲಿ ಮಾಡಲು ಕೇಳಿದಾಗ ಇಷ್ಟೊಂದು ಜನ ಸೇರಿದ್ದಾರೆ, ವಿರೋಧ ಪಕ್ಷದವರು ಒಂದು ವಾರ ಪ್ರಚಾರ ಮಾಡಿದರು. 80 ಅಡಿ ರಸ್ತೆಯಲ್ಲಿ ಜನ ಸೇರಲಿಲ್ಲ ಎಂದು ಹೇಳಿದ ಅವರು ಮೇ 13ರಂದು ಫಲಿತಾಂಶ ಹೊರ ಬೀಳಲಿದ್ದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಿಂದ ಸಂಭ್ರಮಾಚರಣೆ ಮಾಡೋಣ ಎಂದು ಹೇಳಿದರು.