ಅರಸೀಕೆರೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವದ ವಿಜಯ ಸಂಕಲ್ಪ ಯಾತ್ರೆಯು ನಗರಕ್ಕೆ ಆಗಮಿಸಿ, ಬೃಹತ್ ರೋಡ್ ಶೋ ನಡೆಸಿತು.
ವಿಜಯ ಸಂಕಲ್ಪ ಯಾತ್ರೆಯು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ರಾತ್ರಿ ೭.೩೦ ಘಂಟೆಗೆ ಆಗಮಿಸಿತ್ತು. ವಿಜಯ ಸಂಕಲ್ಪ ರಥಯಾತ್ರೆಯನ್ನು ಬಿಜೆಪಿ ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು. ನೂರಾರು ಬಿಜೆಪಿ ಕಾರ್ಯಕರ್ತರ ಬೈಕ್ ರ್‍ಯಾಲಿಯ ಮೂಲಕ ಯಾತ್ರೆಯೂ ಡಾ. ಅಂಬೇಡ್ಕರ್ ಸರ್ಕಲ್ ಬಳಿ ಬಂದಾಗ ಸರ್ಕಲ್‌ನಲ್ಲಿರುವ ಅಂಬೇಡ್ಕರ್ ಕಂಚಿನ ಪ್ರತಿಮೆಗೆ ನಳಿನ್‌ಕುಮಾರ್ ಕಟೀಲ್ ಹೂವಿನ ಹಾರವನ್ನು ಅರ್ಪಿಸಿ ಪುಷ್ಪಾರ್ಚನೆ ನೆರವೇರಿಸಿ, ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಾಗಿತು. ಸಂಕಲ್ಪ ಯಾತ್ರೆಯ ರಥದ ಮುಂದೆ ಬಿಜೆಪಿ ಬಾವುಟ ಕಟ್ಟಿದ್ದ ನೂರಾರು ಬೈಕ್‌ಗಳು ಸಾಗಿದವು.
ನಗರದ ಬಸವೇಶ್ವರ ವೃತ್ತದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ನಮ್ಮ ನಾಯಕರಾದ ಪ್ರಧಾನಿ ನರೇಂದ್ರಮೋದಿ ಅವರು ಜನರಿಗೆ, ಬಡವರಿಗೆ, ರೈತರಿಗೆ, ಕಿಸಾನ್ ಸನ್ಮಾನ್ ಯೋಜನೆ ನೀಡಿದ್ದಾರೆ. ಭಾಗ್ಯಲಕ್ಷಿ ಯೋಜನೆ ಮುಂತಾದ ಬಿಜೆಪಿ ಸರ್ಕಾರದ ಯೋಜನೆಗಳು ಜನರಿಗೆ ತಲುಪಿವೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಕರೋನಾ ಹಾಗೂ ಯುದ್ಧದಿಂದ ಆರ್ಥಿಕ ದುಃಸ್ಥಿತಿಗೆ ತಲುಪಿ ತಿನ್ನುವ ಅನ್ನಕ್ಕೂ ಆಹಾಕಾರ ಪಡುವ ಪರಿಸ್ಥಿತಿ ಎದುರಾಗಿದೆ. ಆದರೆ ಭಾರತ ದೇಶ ಆರ್ಥಿಕವಾಗಿ ದಿನೇ-ದಿನೇ ಅಭಿವೃದ್ಧಿ ಹೊಂದಿ ವಿಶ್ವದಲ್ಲೇ ಎಲ್ಲರೂ ಗುರುತಿಸುವಂತೆ ಮಾಡಿದೆ ಮತ್ತು ಭಾರತದ ಕಡೆ ಪ್ರಪಂಚವೇ ತಿರುಗಿ ನೋಡುವಂತೆ ನಮ್ಮ ನರೇಂದ್ರ ಮೋದಿಜಿ ಮಾಡಿದ್ದಾರೆ. ವೈರಿ ದೇಶವಾದ ಪಾಕಿಸ್ತಾನದ ಜನರು ನರೇಂದ್ರ ಮೋದಿ ನಮ್ಮ ಪ್ರಧಾನಿಯಾಗಲಿ ಎಂದು ಬಯಸುತ್ತಿದ್ದಾರೆ. ಇದು ನಮ್ಮ ನರೇಂದ್ರ ಮೋದಿಜಿ ಅವರಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಅರಸೀಕೆರೆ ಕ್ಷೇತ್ರ ಅಭಿವೃದ್ಧಿಯನ್ನು ಕಂಡಿದ್ದು ಬಿಜೆಪಿ ಸರ್ಕಾರ ಬಂದ ಮೇಲೆ, ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಅಂದಿನ ಕಾಂಗ್ರೇಸ್ ಸಂಸತ್ ಸದಸ್ಯ ಪುಟ್ಟಸ್ವಾಮಿ ಗೌಡ ಅವರು ಅರಸೀಕೆರೆ ಕ್ಷೇತ್ರಕ್ಕೆ ಯಾವುದೇ ಮೂಲದಿಂದ ನೀರು ಬರಲು ಸಾಧ್ಯವಿಲ್ಲ ಎಂದು ಬಹಿರಂಗ ಸಭೆಗಳಲ್ಲಿ ಹೇಳಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಬಿ.ಎಸ್ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಹೊನ್ನವಳ್ಳಿ ಏತ ನೀರಾವರಿ, ಅರಸೀಕೆರೆ ನಗರಕ್ಕೆ ಕುಡಿಯುವ ನೀರು, ತಾಲೂಕಿನ ೫೩೦ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಹಾಗೂ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎತ್ತಿನಹೊಳೆ ಯೋಜನೆ ಮಂಜೂರು ಮಾಡಲಾಗಿತ್ತು. ಅಭಿವೃದ್ಧಿ ಎಂಬುದು ಆರಂಭವಾಗಿದ್ದು ಬಿಜೆಪಿ ಸರ್ಕಾರದಿಂದ ಎಂದು ಹೇಳಿದರು.
ಇತ್ತೀಚೆಗೆ ನಡೆದ ನಾಗಲ್ಯಾಂಡ್, ತ್ರಿಪುರ, ಮೇಘಾಲಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಜನರು ಮಾಡಲಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ಅಸ್ತಿತ್ವ ಇಲ್ಲ ಹಾಗಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ, ಮತ್ತೆ ಕಮಲ ಅರಳಬೇಕು. ನಿಮ್ಮ ಎಲ್ಲರ ಸಹಕಾರದೊಂದಿಗೆ ಬಿಜೆಪಿ ಕಮಲವನ್ನು ಅರಳಿಸಲೇಬೇಕು. ಅರಸೀಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಮತ್ತೆ ಡಬ್ಬಲ್ ಎಂಜಿನ್ ಸರ್ಕಾರ ಮತ್ತೆ ಬರಬೇಕು ಎಂದು ತಿಳಿಸಿದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ, ಈ ದೇಶಕ್ಕೆ ಶಕ್ತಿಯಾಗಿರುವ ಮಹಿಳೆಯರ ದಿನಾಚರಣೆಯಂದು ಜಿಲ್ಲೆಗೆ ವಿಜಯ ಸಂಕಲ್ಪ ಯಾತ್ರೆಯ ಪ್ರವೇಶವಾಗಿದೆ. ಪಕ್ಷದ ಸಂಘಟನೆ ದುರ್ಬಲ ಎನ್ನುವರಿಗೆ ಇಂದು ಸೇರಿರುವ ಜನಸ್ತೋಮದಿಂದ ಉತ್ತರ ಸಿಕ್ಕಿದೆ. ಇದು ಜಿಲ್ಲೆಯ ೭ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎನ್ನುವ ಶುಭ ಸೂಚಕವೆಂದರು.
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಹೆಚ್ಚಿನ ಮತ್ತು ಮೆಚ್ಚಿನ ರಾಜ್ಯನಾಯಕರುಗಳು ಆಗಮಿಸದೇ ಇರುವುದಕ್ಕೆ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು. ಕೆಲವು ಕಾರ್ಯಕರ್ತರು ನಿರಾಶದಾಯಕರಾಗಿದ್ದು ಕಂಡು ಬಂತು. ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ಎನ್. ಆರ್. ಸಂತೋಷ, ಜಿವಿಟಿ ಬಸವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನ ಕುಮಾರ್, ತರೀಕೆರೆ ಶಾಸಕ ಸುರೇಶ್, ಕಡೂರು ಶಾಸಕರಾದ ಬೆಳ್ಳಿ ಪ್ರಕಾಶ, ಬಿಜೆಪಿ ಮುಖಂಡರಾದ ಅಣ್ಣನಾಯಕನಹಳ್ಳಿ ವಿಜಯ್ ಕುಮಾರ್, ಎನ್. ಡಿ. ಪ್ರಸಾದ, ಮುಂತಾದ ಬಿಜೆಪಿ ಮುಖಂಡರು ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದರು.