ಹಾಸನ: ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲ ಕಗ್ಗಂಟಾಗಿ ಮುಂದುವರೆದಿದ್ದು, ಇಂದು ಬೆಂಗಳೂರಿನ ದೇವೇಗೌಡರ ನಿವಾಸದಲ್ಲಿ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಲ್ಲಾ ಮುಖಂಡರ ಸಲಹೆ-ಸೂಚನೆ, ಮಾಹಿತಿಯನ್ನು ಪಡೆಯಲು ಸ್ವತಃ ಎಚ್ ಡಿ ದೇವೇಗೌಡರೇ ಬೆಂಗಳೂರಿನ ತಮ್ಮ ಪದ್ಮನಾಭನಗರದ ನಿವಾಸದಲ್ಲಿ ಸಭೆ ಕರೆದಿದ್ದು, ಯಾರಿಗೆ ಟಿಕೆಟ್ ಲಭ್ಯವಾಗಲಿದೆ ಎಂಬ ಕುತೂಹಲ ಮುಂದುವರೆದಿದೆ.
ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್‌ಗಾಗಿ ಈಗಾಗಲೇ ಮಾಜಿ ಶಾಸಕ ದಿವಂಗತ ಎಚ್ ಎಸ್ ಪ್ರಕಾಶ್ ಅವರ ಪುತ್ರ ಸ್ವರೂಪ್ ಪ್ರಕಾಶ್ ಹಾಗೂ ಭವಾನಿ ರೇವಣ್ಣ ಅವರ ನಡುವೆ ತೀವ್ರ ಪೈಪೋಟಿ ನಡೆಸುತ್ತಿದ್ದು, ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಜಿದ್ದಿಗೆ ಬಿದ್ದಿದ್ದರೆ. ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಹಾಸನ ಟಿಕೆಟ್ ನೀಡುವುದಾಗಿ ಹೆಚ್.ಡಿ.ಕುಮಾರಸ್ವಾಮಿ ಪಟ್ಟು ಹಿಡಿಯುವ ಮೂಲಕ ತಾವು ಸ್ವರೂಪ್ ಪ್ರಕಾಶ ಪರವೆಂದು ನೇರ ನೇರ ಘೋಷಣೆ ಮಾಡಿದ್ದಾರೆ.
ಕಳೆದ ಹಲವು ದಿನಗಳಿಂದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರ ಹಲವು ರೀತಿಯ ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದು, ದೇವೇಗೌಡರ ಕುಟುಂಬದಲ್ಲಿಯೇ ಭಿನ್ನಮತ ಸ್ಫೋಟದ ಹಂತ ತಲುಪಿದೆ. ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರುಗಳು ಬ್ಯಾಟಿಂಗ್ ನಡೆಸಿದ್ದಾರೆ.
ಇದರ ಪರಿಣಾಮ ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆಯೂ ನಡೆಯದೆ ಮುಕ್ತಾಯಗೊಂಡಿದೆ. ಪಂಚರತ್ನ ಯಾತ್ರೆಯಲ್ಲಿ ಒಗ್ಗಟ್ಟು ಪ್ರದರ್ಶನ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್, ಸೂರಜ್ ರೇವಣ್ಣ ಅವರುಗಳು ಪಂಚರತ್ನ ಯಾತ್ರೆಯ ಸಮಾರೊಪ ಸಮಾರಂಭದ ಬಳಿಕ ಪುನಃ ಹಾಸನ ಟಿಕೆಟ್‌ಗಾಗಿ ಫ್ಯಾಮಿಲಿ ಫೈಟಿಂಗ್ ನಡೆಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರೆ. ಹೆಚ್.ಡಿ.ರೇವಣ್ಣ ಕುಟುಂಬ ಮಾತ್ರ ಹಾಸನ ವಿಧಾನಸಭಾ ಕ್ಷೇತ್ರದ ಮೇಲೆ ತಮ್ಮ ಪ್ರಭಾವ ಉಳಿಸಿಕೊಳ್ಳಲು ಸಾಕಷ್ಟು ವಿಫಲ ಯತ್ನ ನಡೆಸಿರುವುದು ಈಗ ಜಗಜ್ಜಾಹಿರಾಗಿದೆ. ಇತ್ತೀಚೆಗೆ ಸ್ವರೂಪ್ ಪ್ರಕಾಶ್ ಪರವಾಗಿ ಮಾತನಾಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಭವಾನಿ ರೇವಣ್ಣ ಅವರನ್ನು ಕುರಿತು ವ್ಯಂಗ್ಯವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಸಚಿವ ರೇವಣ್ಣ, ಸ್ವರೂಪ್ ಅವರು ಯಾರೂ ಎಂದು ಗೊತ್ತಿಲ್ಲವೆನ್ನುವ ಮೂಲಕ ಹೆಚ್.ಡಿ.ಕೆ ಹೇಳಿಕೆಗೆ ನೇರವಾಗಿ ಟಾಂಗ್ ನೀಡಿದ್ದಾರೆ.
ಈ ಮಧ್ಯೆ ಅಖಾಡಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಎಂಟ್ರಿಯಾಗಿದ್ದು, ಇಂದು ಭವಾನಿ ರೇವಣ್ಣ ಪರವಾಗಿ ಬ್ಯಾಟಿಂಗ್ ಮಾಡಲು ಜೆಡಿಎಸ್ ಮುಖಂಡರುಗಳ ಪಟ್ಟಿ ಸಿದ್ದಪಡಿಸಿರುವ ಹೆಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಜಿಲ್ಲೆಯ ಜೆಡಿಎಸ್ ಹಿರಿಯ ನಾಯಕರುಗಳನ್ನು ದೇವೇಗೌಡರ ಬಳಿ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಈ ಗುಂಪಿನಲ್ಲಿ ಮಾಜಿ ಶಾಸಕ ಬಿ.ವಿ.ಕರೀಗೌಡರು, ಕಾರ್‍ಲೆ ಇಂದ್ರೇಶ್, ಬೇಲೂರಿನ ತೋ.ಚ ಅನಂತ ಸುಬ್ಬರಾವ್, ಶಾಸಕರುಗಳಾದ ಹೆಚ್.ಕೆ. ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್, ಮತ್ತಿತರ ಹಲವು ಮುಖಂಡರು ಇದ್ದಾರೆನ್ನಲಾಗುತ್ತಿದೆ.
ಸ್ವರೂಪ್ ಪರವಾಗಿಯೂ ದೇವೇಗೌಡರ ಬಳಿಗೆ ಹೊರಟ ನೂರಾರು ಮುಖಂಡರು
ಇತ್ತ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸ್ವರೂಪ್ ಪ್ರಕಾಶ್ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಸ್ವರೂಪ್ ಪರವಾಗಿಯೂ ನೂರಾರು ಜೆಡಿಎಸ್ ಮುಖಂಡರು, ಸ್ಥಳೀಯ ಸಂಸ್ಥೆಗಳ ಹಲವು ಜನಪ್ರತಿನಿಧಿಗಳು ರೇವಣ್ಣ ಅವರನ್ನು ಲೆಕ್ಕಿಸದೆ ದೇವೇಗೌಡರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.