ಬೇಲೂರು: ನರಸೀಪುರ ಗ್ರಾಮದಲ್ಲಿ ನಮಗೆ ಚುನಾವಣೆಗೆ ಅನುಕೂಲಕ್ಕಾಗಿ ಬೂತ್ ಕಲ್ಪಿಸಿಕೊಡಬೇಕು ಇಲ್ಲದಿದ್ದರೆ ನಾವು ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಪ್ರತೀ 5 ವರ್ಷಕ್ಕೊಮ್ಮೆ ಬರುವ ಚುನಾವಣೆ ಸಂದರ್ಭದಲ್ಲಿ ಓಟಿಗಾಗಿ ನಮ್ಮ ಬಳಿ ಬರುವ ಜನಪ್ರತಿನಿಧಿಗಳು ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿಲ್ಲ. ಇನ್ನು ನರಸೀಪುರ ಭೋವಿ ಕಾಲೋನಿಯಲ್ಲಿ ಸುಮಾರು 300 ಕುಟುಂಬಗಳು ವಾಸವಾಗಿದ್ದು ವೃದ್ದರು, ಅಂಗವಿಕಲರು ಸೇರಿದಂತೆ ಇಲ್ಲಿ ಸುಮಾರು 500 ಮತದಾರರು ಇದ್ದು, ನಮಗೆ ಪ್ರತ್ಯೇಕವಾದ ಬೂತ್ ಅವಶ್ಯಕತೆ ಇದೆ. ಪ್ರತೀ ಬಾರಿಯೂ ನಮಗೆ ಬೂತ್ ಮಾಡಿಕೊಡುತ್ತೇವೆ ಎಂದು ಹೇಳುತ್ತಾರೆ, ಆದರೆ ಈ ಬಾರಿ ನಮಗೆ ಬೂತ್ ಅನ್ನು ನರಸೀಪುರದಲ್ಲಿ ಚುನಾವಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಅಲ್ಲಿಗೆ ಹೋಗಲು 2 ಕಿಮೀ ಆಗುವುದರಿಂದ ನಮ್ಮ ಮತವನ್ನು ಚಲಾಯಿಸಲು ಆಗುತ್ತಿಲ್ಲ. ಅದ್ದರಿಂದ ದಯಮಾಡಿ ನಮ್ಮ ಗ್ರಾಮಕ್ಕೆ ಪ್ರತ್ಯೇಕ ಬೂತ್ ಮಾಡಿಕೊಡಲು ತಾಲೂಕು ಕಚೇರಿಗೆ ದೂರು ಸಲ್ಲಿಸಲು ಬಂದಿದ್ದೇವೆ. ನಮಗೆ ಅವಕಾಶ ಮಾಡಿಕೊಡದಿದ್ದರೆ ನಾವು ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರ ಜೊತೆಗೆ ಗ್ರಾ.ಪಂ ಸದಸ್ಯರಾದ ವೆಂಕಟೇಶ್, ಪೆದ್ದ ಬೋವಿ, ನಾಗರಾಜ್ ಸೇರಿದಂತೆ ಇತರರು ತಿಳಿಸಿದರು.
ಇದೇ ವೇಳೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಮತ ಎಂ. ಮತದಾನ ಎಂಬುವುದು ಪವಿತ್ರವಾದ ಹಕ್ಕು, ಅದನ್ನು ಯಾರೂ ಸಹ ಕಳೆದುಕೊಳ್ಳಬಾರದು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು, ಅಲ್ಲದೆ ಪ್ರತ್ಯೇಕವಾಗಿ ಮತಗಟ್ಟೆ ಅವಶ್ಯಕತೆ ಇದೆ ಎಂದು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ, ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಚುನಾವಣೆ ಹಿಂದಿನ ದಿನ ಬಂದು ನಮಗೆ ಮತಗಟ್ಟೆ ಬದಲಾಯಿಸಿ ಎನ್ನುವುದು ತಪ್ಪು. ಚುನಾವಣೆ ಆಯೋಗ ಏನು ನಿರ್ದೇಶನ ನೀಡಿದ್ದಾರೆ ಅಲ್ಲಿ ಮತಗಟ್ಟೆ ಸ್ಥಾಪಿಸಲಾಗಿದ್ದು, ತಮ್ಮ ಮತವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳದೆ ಯಾವ ಆಮಿಷಗಳಿಗೂ ಒಳಗಾಗಾದೆ ನಿರ್ಬೀತಿಯಿಂದ ಮತದಾನ ಮಾಡಿ. ನಿಮಗೆ ಸಂಪೂರ್ಣ ಸಹಕಾರವನ್ನು ನಾವು ನೀಡುತ್ತೇವೆ. ಅಲ್ಲದೇ ಮುಂದಿನ ಚುನಾವಣೆ ಸಂದರ್ಭದಲ್ಲಿ ನಿಮ್ಮ ಮನವಿ ಪುರಸ್ಕರಿಸಿ, ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಬೋವಿ ಕಾಲೋನಿಯ ಗ್ರಾಮಸ್ಥರು ಹಾಗೂ ಪಿ.ಎಸ್.ಐ ಎಸ್ ಜಿ ಪಾಟೀಲ್, ಪಕ್ಷೇತರ ಅಭ್ಯರ್ಥಿ ಪರಮೇಶ್ ಹಾಜರಿದ್ದರು.