ಹಾಸನ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಇಂದು ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಅರಸೀಕೆರೆ ವಿಧಾನ ಸಭಾ ಕ್ಷೇತ್ರದಿಂದ ಕೆ.ಎಮ್. ಶಿವಲಿಂಗೇಗೌಡ ಹಾಗೂ ಬನವಾಸೆ ರಂಗಸ್ವಾಮಿಗೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಲಾಗಿದೆ.
ಹಾಸನ ವಿಧಾನಸಭಾ ಕ್ಷೇತ್ರದಿಂದ ಪ್ರಮುಖ ಮೂರು ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳ ಘೋಷಣೆ ಅಂತಿಮ ವಾದಂತಾಗಿದೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕೆಎಂಶಿ ಹಾಗೂ ಬಿಜೆಪಿಯಿಂದ ಜಿ.ವಿ ಬಸವರಾಜು ಹೆಸರು ಘೋಷಣೆಯಾಗಿದ್ದು, ಜೆಡಿಎಸ್ ಪಕ್ಷದಿಂದ ಎನ್. ಆರ್ ಸಂತೋಷ್‌ಗೆ ಟಿಕೆಟ್ ಫೈನಲ್ ಎಂದು ಹೇಳಲಾಗುತ್ತಿದೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಪ್ರೀತಮ್ ಗೌಡ ನೆನ್ನೆ ತಾನೆ ನಾಮಪತ್ರ ಪೂರ್ವ ರ್‍ಯಾಲಿಯನ್ನು ಆಯೋಜಿಸುವ ಮೂಲಕ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟ ಸಂದೇಶವನ್ನು ಸಾರಿದ್ದು, ಕ್ಷೇತ್ರದಲ್ಲಿ ತಮಗಿರುವ ಜನ ಬೆಂಬಲವನ್ನು ತೋರ್ಪಡಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ನೆನ್ನೆ ಸಂಜೆ ಎಚ್ ಪಿ ಸ್ವರೂಪ್ ಅವರನ್ನು ಕಣಕ್ಕಿಳಿಸಿದ್ದು ಕಳೆದ ಮೂರು ನಾಲ್ಕು ತಿಂಗಳಿಂದ ಇದ್ದಂತಹ ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷದಿಂದ ನಿರೀಕ್ಷೆಯಂತೆ ಬನವಾಸೆ ರಂಗಸ್ವಾಮಿಗೆ ಟಿಕೆಟ್ ನೀಡಿದ್ದು, ಮತದಾನಕ್ಕೆ ಉಳಿದಿರುವ ಕೆಲವು ದಿನಗಳಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ರಂಗಸ್ವಾಮಿ ಅವರು ಯಾವ ರೀತಿ ಪ್ರಚಾರವನ್ನು ಕೈಗೊಳ್ಳಲಿದ್ದಾರೆ ಹಾಗೂ ಗೆಲುವಿಗೆ ಪ್ರಯತ್ನ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಬಿಜೆಪಿ ಹಾಲಿ ಶಾಸಕ ಪ್ರೀತಂ ಜೆ ಗೌಡ ಈಗಾಗಲೇ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಸುತ್ತಿನ ಪ್ರಚಾರವನ್ನು ಮಾಡಿದ್ದು ಅಂತೆಯೇ ಜೆಡಿಎಸ್ ನ ಸ್ವರೂಪ್ ಪ್ರಕಾಶ್ ಕೂಡ ಟಿಕೆಟ್ ಘೋಷಣೆ ಮುನ್ನವೇ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ.
ಘೋಷಣೆಯಾಗದ ಅರಕಲಗೂಡು ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿ
ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು ಮುಂದುವರೆದಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡಮಗ್ಗೆ ಕೃಷ್ಣೇಗೌಡರನ್ನು ಕಣಕ್ಕಿಳಿಸಲು ಒಲವು ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಮಾಜಿ ಪೊಲೀಸ್ ಅಧಿಕಾರಿ ಶ್ರೀಧರ್ ಗೌಡ ಅವರನ್ನು ಕಣಕ್ಕಿಳಿಸಲು ಉತ್ಸುಕರಾಗಿದ್ದಾರೆನ್ನಲಾಗಿದೆ.
ಈಗಾಗಲೇ ಕ್ಷೇತ್ರದಲ್ಲಿ ಅಪಾರ ಜನ ಬೆಂಬಲವಿರುವ ಕೃಷ್ಣೇಗೌಡರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಹಲವು ಸುತ್ತಿನ ಪ್ರಚಾರ ನಡೆಸಿದ್ದು, ಕಾಂಗ್ರೆಸ್ ಟಿಕೆಟ್ ತಮಗೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದು ಅದರಲ್ಲಿಯೂ ಅರಕಲಗೂಡು ವಿಧಾನಸಭಾ ಕ್ಷೇತ್ರ ಹಾಗೂ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ತೀರ್ಮಾನವಾಗದ ಹಿನ್ನಲೆಯಲ್ಲಿ ಕಾಂಗ್ರೆಸ್ ಎರಡು ಮೂರು ದಿನಗಳ ಬಳಿಕ ಉಳಿದ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿ ಘೋಷಣೆ ಮಾಡಲಿದೆ ಎನ್ನಲಾಗಿದೆ.