ಹಾಸನ: 2023 ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದ್ದು, ಜಿಲ್ಲೆಯ ಜನರಲ್ಲಿ ಯಾರು ಮುಂದಿನ ಸರ್ಕಾರದ ಆಡಳಿತ ಅವಧಿಗೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಮುಂದುವರೆದಿದೆ.
ಈ ಹಿಂದೆ ನಡೆದ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಹಾಲಿ ಶಾಸಕರೇ ಗೆದ್ದಿರುವ ಉದಾಹರಣೆ ಕಾಣಬಹುದು. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಹೆಚ್. ಡಿ. ರೇವಣ್ಣ ಅವರು 1,08,541 ಮತಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಗೂರು ಮಂಜೇಗೌಡ ವಿರುದ್ಧ ಪಡೆದು 43,832 ಮತಗಳ ಅಂತರದಿಂದ ದಾಖಲೆ ಜಯ ಸಾಧಿಸಿದ್ದರು, ಈ ಚುನಾವಣೆಯಲ್ಲಿ ಬಾಗೂರು ಮಂಜೇಗೌಡ ಅವರು 64,709 ಮತ ಪಡೆದಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ದಿವಂಗತ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಸ್ಪರ್ಧೆ ನಡೆಸಿದ್ದು, ಜೆಡಿಎಸ್ ಪಕ್ಷದಿಂದ ಎಂಟನೇ ಬಾರಿಗೆ ರೇವಣ್ಣ ಅವರು ಸ್ಪರ್ಧೆ ನೀಡಿದ್ದು ಫಲಿತಾಂಶ ಹೊರ ಬರಬೇಕಿದೆ.
ಇನ್ನು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎನ್ ಬಾಲಕೃಷ್ಣ ಸತತ ಎರಡು ಬಾರಿ ಗೆಲುವು ಸಾಧಿಸಿದ್ದರು. ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್ ಪುಟ್ಟೇಗೌಡ ಅವರ ವಿರುದ್ಧ 1,05,516 ಮತಗಳನ್ನು ಪಡೆಯುವ ಮೂಲಕ 53,012 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಿ ಎಸ್ ಪುಟ್ಟೇಗೌಡ ಈ ಚುನಾವಣೆಯಲ್ಲಿ 52,504 ಮತಗಳನ್ನು ಪಡೆದಿದ್ದರು. ಈ ಬಾರಿ ಹ್ಯಾಟ್ರಿಕ್ ಸಾಧನೆಯ ಗುರಿ ತಲುಪುವ ನಿರೀಕ್ಷೆಯಲ್ಲಿ ಬಾಲಕೃಷ್ಣ ಅವರಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಪರಿಷತ್ ಮಾಜಿ ಸದಸ್ಯ ಎಂ.ಎ ಗೋಪಾಲಸ್ವಾಮಿ ಸ್ಪರ್ಧೆ ಮಾಡಿದ್ದು ಇವರಿಬ್ಬರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿಯೂ ಸತತ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದ ಕೆಎಂ ಶಿವಲಿಂಗೇಗೌಡರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ 93,178 ಮತಗಳನ್ನು ಪಡೆದು ಕಾಂಗ್ರೆಸ್ ಪಕ್ಷದ ಜಿ.ಬಿ ಶಶಿಧರ್ ವಿರುದ್ಧ 42,881 ಮತಗಳ ಅಂತರದಿಂದ ಗೆಲುವು ಪಡೆದು ಮಿಂಚಿದ್ದರು. ಕಾಂಗ್ರೆಸ್‌ನ ಶಶಿಧರ್ ರವರು 50,297 ಮತಗಳನ್ನು ಪಡೆದಿದ್ದರು. ಈ ಬಾರಿ ನಾಲ್ಕನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಲು ಜೆಡಿಎಸ್ ತೊರೆದ ಶಿವಲಿಂಗೇಗೌಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದು, ಇವರ ವಿರುದ್ಧ ಜೆಡಿಎಸ್ ಪಕ್ಷದಿಂದ ಎನ್ ಆರ್ ಸಂತೋಷ್ ಸ್ಪರ್ಧೆ ಮಾಡಿರುವುದು ತೀರ ಪೈಪೋಟಿಗೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ನಾಳೆಯ ಫಲಿತಾಂಶ ತೀವ್ರ ಕುತೂಹಲದಿಂದ ಕೂಡಿದೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಅವಧಿಗೆ ಆಯ್ಕೆ ಬಯಸಿರುವ ಬಿಜೆಪಿಯಿಂದ ಪ್ರೀತಂ ಜೆ. ಗೌಡ 63,348 ಮತಗಳಿಂದ ಜೆಡಿಎಸ್ ಪಕ್ಷದ ಎಚ್.ಎಸ್ ಪ್ರಕಾಶ್ ವಿರುದ್ಧ 13,006 ಮತಗಳಿಂದ ಗೆಲುವು ಸಾಧಿಸಿದ್ದರು. ಎಚ್‌ಎಸ್ ಪ್ರಕಾಶ್ ಅವರು 50,342 ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ದಿ| ಹೆಚ್.ಎಸ್ ಪ್ರಕಾಶ್ ಪುತ್ರ ಸ್ವರೂಪ್ ಜೆಡಿಎಸ್‌ನಿಂದ ಸ್ಪರ್ಧೆ ನಡೆಸಿದ್ದು ತೀವ್ರ ಪೈಪೋಟಿ ಏರ್ಪಟ್ಟಿದೆ. ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೆ ಆಯ್ಕೆಗೊಂಡಿರುವುದು ಸಾಕಷ್ಟಿದೆ. ಆದರೂ ಕ್ಷೇತ್ರದ ಮತದಾರ ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬುದಕ್ಕೆ ನಾಳೆ ಅಧಿಕೃತ ತೆರೆ ಬೀಳಲಿದೆ.
ಆಲೂರು-ಸಕಲೇಶಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಶಾಸಕ ಎಚ್ ಕೆ ಕುಮಾರಸ್ವಾಮಿ 62,262 ಮತಗಳನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಬಿಜೆಪಿಯ ನಾರ್ವೆ ಸೋಮಶೇಖರ್ 57,320 ಮತಗಳನ್ನು ಪಡೆದಿದ್ದರು ಹಾಗೂ ಕುಮಾರಸ್ವಾಮಿ ಕೇವಲ 4,962 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಯಾವ ರೀತಿಯ ಫಲಿತಾಂಶ ಕ್ಷೇತ್ರದ ಮತದಾರರು ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುರಳಿ ಮೋಹನ್ ಹಾಗೂ ಬಿಜೆಪಿಯಿಂದ ಸಿಮೆಂಟ್ ಮಂಜು ಅವರು ಕುಮಾರ ಸ್ವಾಮಿಗೆ ತೀವ್ರ ಪೈಪೋಟಿ ನೀಡಿದ್ದಾರೆ, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಎ.ಟಿ ರಾಮಸ್ವಾಮಿ , 85,064 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎ.ಮಂಜು ಅವರು 74,411 ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಎ.ಟಿ ರಾಮಸ್ವಾಮಿ 10,653 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಎ.ಟಿ ರಾಮಸ್ವಾಮಿಯವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಎ.ಮಂಜು ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ಟಿ ಕೃಷ್ಣೆಗೌಡ ಅವರು ಸ್ಪರ್ಧೆ ಮಾಡಿದ್ದು ಫಲಿತಾಂಶ ಕಗ್ಗಂಟಾಗಿದೆ.
ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಆಯ್ಕೆ ಬಯಸಿ, ಜೆಡಿಎಸ್ ನ ಕೆ.ಎಸ್ ಲಿಂಗೇಶ್ ಸ್ಪರ್ಧೆ ಮಾಡಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ 64,268 ಮತಗಳನ್ನು ಪಡೆದಿದ್ದರು. ಪ್ರತಿ ಸ್ಪರ್ಧಿ ಬಿಜೆಪಿಯ ಎಚ್ ಕೆ ಸುರೇಶ್ 44,578 ಮತಗಳನ್ನು ಪಡೆದಿದ್ದರು, ಲಿಂಗೇಶ್ ಅವರು 19,690 ಮತಗಳಿಂದ ಜಯ ದಾಖಲಿಸಿದ್ದರು. ಈ ಬಾರಿ ಬಿಜೆಪಿಯಿಂದ ಎಚ್.ಕೆ ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್ ನಿಂದ ಬಿ ಶಿವರಾಂ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ನಾಳೆಯ ಫಲಿತಾಂಶ ಕುತೂಹಲ ಮೂಡಿಸಿದೆ.
ಒಟ್ಟಾರೆ ನಾಳೆ ನಡೆಯುವ ಮತ ಎಣಿಕೆ ಫಲಿತಾಂಶ ಹಾಲಿ ಇರುವ ಶಾಸಕರಿಗೆ ಮತ್ತೊಮ್ಮೆ ಅಧಿಕಾರ ಹಿಡಿಯಲು ಅವಕಾಶ ಮಾಡಿಕೊಡಲಿದೆಯೇ ಹಾಗೂ ಹೊಸ ಮುಖಗಳನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಜನರು ಆಶೀರ್ವಾದ ನೀಡಲಿದ್ದಾರೆಯೇ ಎಂಬ ಕುತೂಹಲ ಮುಂದುವರೆದಿದೆ. ನಾಳೆ ನಡೆಯುವ ಮತ ಎಣಿಕೆ ನಂತರ ಎಲ್ಲಾ ಗೊಂದಲಕ್ಕೆ ತೆರೆ ಬೀಳಲಿದೆ.