ಹಾಸನ: ಜಿಲ್ಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಪಂಚರತ್ನ ಯಾತ್ರೆ ಆರಂಭಗೊಂಡಿದ್ದು, ಇಂದು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ ೧೧:೩೦ಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಗಡಿ ಗ್ರಾಮ ಹಿರಿಸಾವೆಯಲ್ಲಿ ಅದ್ದೂರಿ ಸ್ವಾಗತ ಮಾಡಲಾಯಿತು.
ನಂತರ ಚನ್ನರಾಯಪಟ್ಟಣದಲ್ಲಿ ರೋಡ್ ಶೋ ಹಾಗೂ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದ್ದು, ಸ್ಥಳೀಯ ಶಾಸಕ ಸಿ.ಎನ್ ಬಾಲಕೃಷ್ಣ, ಮಾಜಿ ಸಚಿವ ಎಚ್. ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸಾಥ್ ನೀಡಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಸಮಾವೇಶದ ಬಳಿಕ ಶ್ರವಣಬೆಳಗೊಳದಲ್ಲಿ ರೋಡ್ ಶೋ ಹಾಗೂ ನಂತರ ಶ್ರವಣಬೆಳಗೊಳ ಹೋಬಳಿಯ ವಡ್ಡರಹಳ್ಳಿಯಲ್ಲಿ ಎಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಮಾ. ೧೮ರಂದು ಹಾಸನದಲ್ಲಿ ಪಂಚರತ್ನ ಯಾತ್ರೆ…!?
ಇಂದಿನಿಂದ ಹಾಸನ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಆರಂಭಗೊಂಡಿದ್ದು ಮಾರ್ಚ್ ೧೭ಕ್ಕೆ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ. ಮಾರ್ಚ್ ೧೮ ದಿನಾಂಕವನ್ನು ಬಾಕಿ ಇಡಲಾಗಿದ್ದು ಅಷ್ಟರೊಳಗೆ ಎಲ್ಲಾ ಸುಗಮವಾಗಿ ತೀರ್ಮಾನ ಆದರೆ ಅಂದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ಸಮಾವೇಶ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದರು. ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧವಾಗುತ್ತಿದ್ದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡುವ ವಿಚಾರವಾಗಿ ಇಂದಿಗೂ ಬದ್ದನಾಗಿದ್ದು ಅದರಂತೆಯೇ ಪಟ್ಟಿಯಲ್ಲಿ ಹೆಸರು ಇರಲಿದೆ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು.
ಸ್ವರೂಪ್‌ಗೆ ಟಿಕೆಟ್ ಕೊಡಿ…!!
ಹಾಸನ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ೮೧ ದಿನದ ಪಂಚರತ್ನ ಯಾತ್ರೆ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಹಾಸನದಲ್ಲಿ ಸ್ವರೂಪ ಅವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ ಪ್ರಸಂಗ ನಡೆಯಿತು. ಹಾಸನದಲ್ಲಿ ಸ್ವರೂಪಕ್ಕೆ ಟಿಕೆಟ್ ಕೊಡಿ ಎಂದು ಒತ್ತಾಯಿಸಿದ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿಯವರನ್ನು ಸುತ್ತುವರೆದು ಸ್ವರೂಪ್ ಪರ ಘೋಷಣೆಗಳನ್ನು ಕೂಗಿದರು.