ಹಾಸನ: ರಾಜಕೀಯ ಇತಿಹಾಸ ಹೊಂದಿರುವ ಹಾಸನ ಜಿಲ್ಲೆಯಲ್ಲಿ ಇಡೀ ಜಿಲ್ಲೆಯದ್ದೇ ಒಂದು ತೂಕವಾದರೆ ಹಾಸನ ವಿಧಾನಸಭಾ ಕ್ಷೇತ್ರದ್ದೇ ಮತ್ತೊಂದು ತೂಕವೆಂಬಂತೆ ಕ್ಷೇತ್ರದ ರಾಜಕೀಯ ಸಂಚಲನವನ್ನುಂಟು ಮಾಡುತ್ತಿದೆ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಜೆಡಿಎಸ್‌ನೊಳಗೆ ಹಾದಿ ರಂಪ-ಬೀದಿ ರಂಪಾಟವಾಗಿ ರಾಜ್ಯದ ಗಮನ ಸೆಳೇದಿದೆ.
ಹಾಲಿ ಶಾಸಕ ಪ್ರೀತಂ ಮಣಿಸಲು ಅಭ್ಯರ್ಥಿಗಾಗಿ ಪೈಪೋಟಿಗೆ ಇಳಿದಿದ್ದರೂ ಈವರೆಗೆ ಅದು ಯಶಸ್ಸು ಕಂಡಿಲ್ಲ. ಈ ನಡುವೆ ಹಾಸನದಲ್ಲಿದ್ದು ಶಾಸಕ ಪ್ರೀತಂ ಜೆ ಗೌಡ ನಡೆಸಿದ ನಾಮಪತ್ರ ರ್‍ಯಾಲಿ ಅಭೂತ ಪೂರ್ವ ಯಶಸ್ಸು ಕಂಡಿದೆ. ನೂರಾರು ವಾಹನಗಳಲ್ಲಿ ನಗರಕ್ಕೆ ಆಗಮಿಸಿದ ಸಹಸ್ರಾರು ಮಂದಿ, ಬಿಳಿ ಟೋಪಿ ಧರಿಸಿ ಕೇಸರಿ ಶಾಲು ಹೊದ್ದು ಪ್ರೀತಂ ಜೆ ಗೌಡ ಪರ ಘೋಷಣೆ ಕೂಗುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು.
ಇಂದು ಬೆಳಗ್ಗೆ 9.30ರಿಂದ ನಗರಕ್ಕೆ ಆಗಮಿಸಿದ ಹಲವು ವಾಹನಗಳು ಸಹಸ್ರಾರು ಜನರನ್ನು ಕರೆ ತಂದಿದ್ದವು. ನಗರದ ಜಿಲ್ಲಾ ಕ್ರೀಡಾಂಗಣ ಪ್ರದೇಶ, ಹೇಮಾವತಿ ನಗರ, ರಿಂಗ್ ರಸ್ತೆ, ಸಾಲ ಗಾಮೆ ರಸ್ತೆ, ಎಂ.ಜಿ.ರಸ್ತೆ, ಆರ್.ಸಿ ರಸ್ತೆಗಳು ಪ್ರೀತಂ ಜೆ ಗೌಡ ಅವರ ಪರವಾಗಿ ಆಗಮಿಸಿದ್ದ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದವು. ಉರಿಯುವ ಬಿಸಿಲಿನಲ್ಲಿ ಕಣ್ಣಾಯಿಸಿದುದ್ದಕ್ಕೂ ಬಿಳಿ ಟೋಪಿ, ಕೇಸರಿ ಶಾಲು ಹೊದ್ದಿದ್ದ ಜನರು ದುಂಬಿಗಳ ಇಂಡು ಕಂಡಂತೆ ಕಂಡು ಬರುತ್ತಿದ್ದದ್ದು ಸಾಮಾನ್ಯವಾಗಿತ್ತು.
ಎಲ್ಲೆಲ್ಲೂ ಪ್ರೀತಂ ಜೆ ಗೌಡ ಪರ ಘೋಷಣೆ, ಬಿಜೆಪಿ ಪರ ಘೋಷಣೆ ಮೊಳಗುತ್ತಿತ್ತು. ಮೆರವಣಿಗೆಯ ಒಂದು ತುದಿ ಹಾಸನದ ಎನ್.ಆರ್ ವೃತ್ತದಲ್ಲಿದ್ದರೆ ಮತ್ತೊಂದು ತುದಿ ನಗರದ ಸಾಲಗಾಮೆ ರಸ್ತೆಯ ಎಂ.ಸಿ.ಇ ಕಾಲೇಜಿನವರೆಗೆ, ಇದು ಮಾತ್ರ ನೋಡುಗರ ಉಬ್ಬೇರಿಸಿತ್ತು. ಸಾಗರೋಪಾದಿಯಲ್ಲಿ ಬಂದ ಜನರು ಸಾಲಗಾಮೆ ರಸ್ತೆ ಮಾರ್ಗವಾಗಿ ಮಹಾವೀರ ವೃತ್ತ, ಎನ್.ಆರ್ ವೃತ್ತ ತುಲುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಾಗ ಬೇಕಿತ್ತಾದರೂ ಜನರ ಅತಿಯಾದ ದಟ್ಟಣೆಗೆ, ಮೆರವಣಿಗೆಯಲ್ಲಿ ದೊಡ್ಡ ಸಾಗರ ಹೊರಟರೆ ಮತ್ತೊಂದೆಡೆ ನಗರದ ಜಿಲ್ಲಾ ಕ್ರೀಡಾಂಗಣದಿಂದ ಸಾವಿರಾರು ಮಂದಿ ಆರ್.ಸಿ ರಸ್ತೆ ಮಾರ್ಗವಾಗಿ ಮತ್ತೊಂದು ಮೆರವಣಿಗೆ ಸಾಗಿದಂತೆ ಎನ್.ಆರ್ ವೃತ್ತದತ್ತ ಚಲಿಸುತ್ತಿತ್ತು.
ಸಹಸ್ರಾರು ಮಂದಿ ನಗರದ ಮಹಾರಾಜ ಪಾರ್ಕ್‌ನಲ್ಲಿ ಹಾದು ಎನ್.ಆರ್ ವೃತ್ತದತ್ತಾ ಬರುತ್ತಿದ್ದರು. ಈ ಬೃಹತ್ ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರಾದರೂ ಬಿಜೆಪಿಯ ಸ್ವಯಂ ಸೇವಕರ ತಂಡವೇ ಜನಸ್ತೋಮವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಾ ಸಾಗಿದ್ದು ವಿಶೇಷವಾಗಿತ್ತು.
ತೆರೆದ ವಾಹನದಲ್ಲಿ ಶಾಸಕ ಪ್ರೀತಂ ಜೆ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಸಿಮೆಂಟ್ ಮಂಜು, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ನವಿಲೇ ಅಣ್ಣಪ್ಪ, ಹಿರಿಯ ಬಿಜೆಪಿ ಮುಖಂಡರಾದ ಹೆಚ್.ಎಂ.ಸುರೇಶ್ ಕುಮಾರ್, ಮತ್ತಿತರರು ಸಹಸ್ರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ನಗರದ ಕ್ರೀಡಾಂಗಣದಿಂದ ಹೊರಟು ಸಾಲಗಾಮೆ ರಸ್ತೆ, ಸಹ್ಯಾದ್ರಿ ವೃತ್ತ, ಮಹಾವೀರ ವೃತ್ತ, ಬಳಿಕ ಎನ್.ಆರ್ ವೃತ್ತದ ವರೆಗೆ ಸಾಗಿ ಬಂದರು.
ಬೆಳಗ್ಗೆ 10.30ಕ್ಕೆ ಆರಂಭಗೊಂಡ ಮೆರವಣಿಗೆ ಎನ್.ಆರ್.ವೃತ್ತಕ್ಕೆ ಆಗಮಿಸುವ ವೇಳೆ 1 ಗಂಟೆಯಾಗಿದ್ದು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಜನಸಂಖ್ಯೆಗೂ ಸಾಕ್ಷಿಯಾಯಿತು. ಈ ನಡುವೆ ಸಹಸ್ರಾರು ಜನರ ಮಧ್ಯೆ ರೋಡ್ ಶೋನಲ್ಲಿ ಭಾಗವಹಿಸಿದ ಪ್ರೀತಂ ಜೆ ಗೌಡ ಪ್ರತಿಯೊಬ್ಬ ಕಾರ್ಯಕರ್ತರಿಗೆ ಹಾಗೂ ರಸ್ತೆಯ ಪಕ್ಕದಲ್ಲಿ ನಿಂತಿದ್ದಂತಹ ಸಾರ್ವಜನಿಕರಿಗೆ ಕೈಬೀಸಿ ಗೆಲುವಿನ ನಗೆ ಬೀರುತ್ತಾ ನಮಸ್ಕರಿಸುತ್ತಾ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದಲ್ಲಿ ಜನ ದಟ್ಟಣೆ: ಪರದಾಡಿದ ವಾಹನ ಸವಾರರು
ನಗರದಲ್ಲಿ ನಡೆದ ಪ್ರೀತಂ ಜೆ ಗೌಡರ ನಾಮಪತ್ರ ರ್‍ಯಾಲಿಗೆ ಹಿಂದೆಂದೂ ಕಂಡು ಕೇಳರಿಯದಷ್ಟು ಸಂಖ್ಯೆಯಲ್ಲಿ ಆಗಮಿಸಿದ ಸಹಸ್ರಾರು ಸಂಖ್ಯೆಯಲ್ಲಿದ್ದ ಜನರಿಂದಾಗಿ ನಗರದಲ್ಲಿ ಎಲ್ಲೆಡೆ ವಾಹನ ದಟ್ಟಣೆ ಕಂಡು ಬಂದಿತು. ಎಲ್ಲಿ ನೋಡಿದರೂ ನೂರಾರು, ಸಾವಿರಾರು ಜನರ ಗುಂಪುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರಿಂದ ಮೂರರಿಂದ ನಾಲ್ಕು ಗಂಟೆಗಳ ಕಾಲ ನಗರದಲ್ಲಿ ದಿಗ್ಭಂಧನದ ವಾತಾವರಣ ಕಂಡು ಬಂದಿತ್ತು. ಜನ ದಟ್ಟಣೆಯಿರುವ ರಸ್ತೆಗಳಲ್ಲಿ ಸಂಚರಿಸಿದ ವಾಹನ ಸವಾರರು ಒಂದು ರಸ್ತೆ ಕ್ರಮಿಸಲು ಒಂದು ಗಂಟೆಗಳ ಕಾಲ ಪರದಾಡುತ್ತಿದ್ದದ್ದು ಸಹ ಕಂಡು ಬಂದಿತು.