ಹಾಸನ: ದೇವೇಗೌಡ ಕುಟುಂಬ ಅಂದರೆ ಹುಡುಗಾಟ ಅಲ್ಲ. ನಮ್ಮ ಅಭ್ಯರ್ಥಿಯನ್ನು(ಸ್ವರೂಪ್ ಪ್ರಕಾಶ್) ಗೆಲ್ಲಿಸಲು ನಮ್ಮ ಕುಟುಂಬ ಒಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ತಿಳಿಸಿದರು.
ಹಾಸನ ವಿಧಾನಸಭಾ ಕ್ಷೇತ್ರದ ಸ್ವರೂಪ್ ಪ್ರಕಾಶ್ ಪರಾ ರೋಡ್ ಶೋನಲ್ಲಿ ಭಾಗವಹಿಸಲು ಆಗಮಿಸಿದ ಅವರು ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ “ಓರ್ವ ಶಾಸಕನನ್ನು ಸೋಲಿಸಲು ಇಡಿ ಕುಟುಂಬ ಟೊಂಕಕಟ್ಟಿ ನಿಂತಿದೆ” ಎಂಬ ಪ್ರೀತಂ ಗೌಡರ ಟೀಕೆಗೆ ಉತ್ತರಿಸಿದ ಅವರು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ನಾವು ಒಟ್ಟಾಗಿದ್ದು, ದೇವೇಗೌಡ ಕುಟುಂಬ ಎಂದರೆ ಹುಡುಗಾಟವಲ್ಲ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ಎದುರಾಳಿಗಳು ಬಹಳ ಲಘುವಾಗಿ ಮಾತನಾಡಿದ್ದಾರೆ. ಆದ್ದರಿಂದಲೇ ನಮ್ಮ ಕುಟುಂಬ ಒಗ್ಗಟ್ಟಿನಿಂದ ಪಕ್ಷವನ್ನು ಗೆಲ್ಲಿಸಲು ಮುಂದೆ ಬಂದಿದೆ ಹಾಗೂ ಮುಂದಿನ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಇದಕ್ಕೆಲ್ಲ ಉತ್ತರ ನೀಡಲಿದ್ದಾರೆ ಎಂದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕೂಡ ಬಿಜೆಪಿ ಗೆಲ್ಲುವ ಹಂತದಲ್ಲಿ ಇರಲಿಲ್ಲ, ಅವರು(ಪ್ರೀತಂಗೌಡ) ಆಕಸ್ಮಿಕವಾಗಿ ಗೆದ್ದಿದ್ದು. ಅದು ಸೋಲುವ ಚುನಾವಣೆ ಆಗಿರಲಿಲ್ಲ, ಈ ಬಾರಿಯೂ ಜೆಡಿಎಸ್ 40ರಿಂದ 50,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಳೆನರಸೀಪುರದಲ್ಲಿ ಪ್ರೀತಮ್ ಗೌಡ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ನಿಲ್ಲಬಹುದು ಅದು ಅವರ ಪಕ್ಷದ ತೀರ್ಮಾನ. ಎದುರಾಳಿಗಳ ಮಾತಿಗೆಲ್ಲ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು. ಹಾಸನದಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುವ ಕುರಿತು ಬಿಜೆಪಿ ಅಭ್ಯರ್ಥಿ ಪ್ರೀತಮ್ ಗೌಡ ಹೇಳುತ್ತಾರೆ “ಒಂದು ಲಕ್ಷ ಮತ ಇಡೀ ರಾಜ್ಯದ್ದು” ಎಂದು ಲೇವಾಡಿ ಮಾಡಿದರು,
ಪ್ರೀತಂರನ್ನು ಸೋಲಿಸಿ
ಈ ವೇಳೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮಾತನಾಡಿ, ಪ್ರೀತಂ ಗೌಡರನ್ನು ಈ ಬಾರಿ ಸೋಲಿಸಲೇಬೇಕು. ಅವರು ಏನೇನು ಮಾಡಿದ್ದಾರೆ ಎಂದು ಇನ್ನೊಂದು ದಿನ ಹಾಸನಕ್ಕೆ ಬಂದಾಗ ಹೇಳುವೆ. ಈ ಬಾರಿಯ ಚುನಾವಣೆಯಲ್ಲಿ ಸ್ವರೂಪ ಅವರನ್ನು ಬೆಂಬಲಿಸಿ ಆಶೀರ್ವದಿಸುವಂತೆ ಕರೆ ನೀಡಿದರು.
ಸಂಸದ ಪ್ರಜ್ವಲ್ ರೇವಣ್ಣ ಅವರು ಮಾತನಾಡಿ ಸ್ಥಳೀಯ ಶಾಸಕ ಪ್ರೀತಂ ಜೆ ಗೌಡ ಅವರನ್ನು ಈ ಬಾರಿ ಜಿಲ್ಲೆಯಿಂದ ಓಡಿಸಬೇಕು, ಇವತ್ತಿನಿಂದ ಚುನಾವಣೆ ಪ್ರಾರಂಭವಾಗಿದ್ದು ಟೊಂಕ ಕಟ್ಟಿ ಜೆಡಿಎಸ್ ಪರ ನಿಲ್ಲಬೇಕು ಎಂದು ಕರೆ ನೀಡಿದರು.