ಹಾಸನ: ಜೆಡಿಎಸ್ ಮುಖಂಡರು ಕಟ್ಟಾಯ ಹೋಬಳಿ ವಿಚಾರವಾಗಿ ಕಾಂಗ್ರೆಸ್ ಮುಖಂಡರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ವಕ್ತಾರ ದೇವರಾಜೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಟ್ಟಾಯ ಹೋಬಳಿ ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿರುವ ವಿಚಾರವಾಗಿ ಕಾಂಗ್ರೆಸ್ ನಾಯಕರಾದ ಡಿ.ಕೆ ಸುರೇಶ ಅವರು ಹೇಳಿರುವ ವಿಚಾರ ಸತ್ಯವಾಗಿದ್ದು, ಚುನಾವಣೆ ಸಂದರ್ಭದಲ್ಲಿ ಸೋಲುವ ಭೀತಿಯಿಂದ ಜೆಡಿಎಸ್ ಮುಖಂಡರು ಈ ವಿಚಾರವನ್ನು ತಮ್ಮ ಇಷ್ಟಕ್ಕೆ ಸಮರ್ಥಿಸಿ ಕೊಳ್ಳುತ್ತಿದ್ದಾರೆ ಎಂದರು.
2008ರಲ್ಲಿ ಕಟ್ಟಾಯ ಹೋಬಳಿಯನ್ನು ಹಾಸನ ವಿಧಾನಸಭಾ ಕ್ಷೇತ್ರದಿಂದ ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲು ಜೆಡಿಎಸ್ ನ ಮುಖಂಡರೇ ಕಾರಣ, ಕುಲದೀಪ್ ಸಿಂಗ್ ಆಯೋಗದಲ್ಲಿ ಎಚ್.ಡಿ ದೇವೇಗೌಡರು ಸದಸ್ಯರಾಗಿದ್ದರು. ಅಂದು ಕಟ್ಟಾಯ ಹೋಬಳಿ, ಸಂಪೂರ್ಣವಾಗಿ ಕಾಂಗ್ರೆಸ್ ಮಯವಾಗಿತ್ತು. ಆದ್ದರಿಂದ ಮೀಸಲು ಕ್ಷೇತ್ರಕ್ಕೆ ಸೇರಿಸಲು ಶತಾಯಗತಾಯ ಪ್ರಯತ್ನ ಮಾಡಿದ್ದು ಜೆಡಿಎಸ್ ನವರೇ ಎಂದರು.
ಕಟ್ಟಾಯ ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸುವ ವಿಚಾರವಾಗಿ ಕೆ.ಎಚ್ ಹನುಮೇಗೌಡರು ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದರು. ಅಂದು ಮುಖ್ಯ ಮಂತ್ರಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಪ್ರಯತ್ನಿಸಿದರು. ನಿಯೋಗವನ್ನು ಭೇಟಿ ಮಾಡದೆ ಬೇರೆಯವರಿಂದ ಮನವಿಯನ್ನು ಸ್ವೀಕರಿಸಿದ್ದನ್ನು ಜೆಡಿಎಸ್ ಮುಖಂಡರು ಮರೆಯಬಾರದು ಎಂದರು.
ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಸಹ ಸಕಲೇಶಪುರಕ್ಕೆ ಕಟ್ಟಾಯ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದೇವೆ. ಇಷ್ಟೆಲ್ಲಾ ವಿರೋಧದ ನಡುವೆಯೂ ಜೆಡಿಎಸ್ ನ ಮುಖಂಡರು ಅಧಿಕಾರ ದುರುಪಯೋಗಪಡಿಸಿಕೊಂಡು ಕಟ್ಟಾಯವನ್ನು ಸೇರಿಸಿದ್ದಾರೆ. ಇದೀಗ ಅಭಿವೃದ್ಧಿಯನ್ನು ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಜನರ ಕಣ್ಣ ಮುಂದೆ ಇದೆ.ಇತ್ತೀಚಿಗೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮವನ್ನು ಕಂಡು ಸೋಲುವ ಭೀತಿಯಿಂದ ಜೆಡಿಎಸ್ ಮುಖಂಡರ ಇಲ್ಲಸಲ್ಲದ ಹೇಳಿಕೆ ಶೋಭೆ ತರುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಗೆವಾಳು ದೇವಪ್ಪ, ರಂಜಿತ್ ಗೊರೂರು, ಅಶೋಕ ಹಾಗೂ ಇತರರು ಇದ್ದರು.