ಹಾಸನ: ಕಳೆದ ಹಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿ ಹರಡಿ ಜೆಡಿಎಸ್ ಕುಟುಂಬದೊಳಗೆ ಬಿರುಕು ಮೂಡಿಸುವ, ಸಂಚಲನ ಸೃಷ್ಠಿಸಿ ಜೆಡಿಎಸ್ ಪಾಳಯದಲ್ಲಿ ತೀವ್ರ ತಲ್ಲಣ ಸೃಷ್ಠಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು ಕೊನೆಗೂ ಬಗೆಹರಿಯುವ ಹಂತ ತಲುಪಿದ್ದು ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಂ.ರಾಜೇಗೌಡರು ಆಯ್ಕೆಯಾಗುವ ಸಾಧ್ಯತೆ ಕಂಡು ಬಂದಿದೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ, ತಮಗೆ ಪಕ್ಷದ ಟಿಕೆಟ್ ದೊರೆಯುತ್ತದೆ ಎಂಬ ವಿಶ್ವಾಸದಲ್ಲಿ ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಸ್ವರೂಪ್ ಪ್ರಕಾಶ ತಮ್ಮ ತಮ್ಮ ಬೆಂಬಲಿಗರೊಂದಿಗೆ ಎರಡು ಪ್ರತ್ಯೇಕ ಗುಂಪಿನೊಂದಿಗೆ ಪ್ರತ್ಯೇಕವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಹಾಸನ ಜೆಡಿಎಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿ ರಾಜ್ಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು.
ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಎರಡು ಬಣಗಳಾಗಿ ಬೇರ್ಪಟ್ಟಿತ್ತು ಎಂದರೆ ತಪ್ಪಾಗಲಾರದು. ಒಂದೆಡೆ ರೇವಣ್ಣ ಅಂಡ್ ಫ್ಯಾಮಿಲಿ (ಸಂಸದ ಪ್ರಜ್ವಲ್, ಎಂಎಲ್‌ಸಿ ಸೂರಜ್ ಮತ್ತು ಭವಾನಿ ರೇವಣ್ಣ) ತಮಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದು ಬಹಿರಂಗ ಹೇಳಿಕೆ ನೀಡುವುದು, ಟಿಕೆಟ್‌ಗಾಗಿ ಪ್ರತಿಭಟನೆ ನಡೆಸಿದ್ದರೆ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಕುಮಾರಣ್ಣಾ ಯಾವುದೇ ಕಾರಣಕ್ಕೂ ಕುಟುಂಬದವರು ತಲೆ ಕೊಡುವ ಅಗತ್ಯವಿಲ್ಲ. ನಮ್ಮ ಕುಟುಂಬದವರು ಸ್ಪರ್ಧೆ ಮಾಡುವುದಿಲ್ಲ. ಅಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇನೆ ಎನ್ನುತ್ತಲೇ ರೇವಣ್ಣ ಕುಟುಂಬದ ಸ್ಪರ್ಧೆಯನ್ನು ಬಹಿರಂಗವಾಗಿಯೇ ತಳ್ಳಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದು ದೊಡ್ಡ ಮಟ್ಟದಲ್ಲಿ ತಾರಕಕ್ಕೆ ಹೋಗುವ ಮುನ್ಸೂಚನೆ ದೊರೆತ ಬಳಿಕ ಹಾಸನ ಜೆಡಿಎಸ್ ಟಿಕೆಟ್ ತೀರ್ಮಾನ ದೇವೇಗೌಡರ ಅಂಗಳಕ್ಕೆ ಹೋಗಿತ್ತು. ಇದಾದ ಬಳಿಕ ಸ್ವರೂಪ್ ಪ್ರಕಾಶ ಹಾಗೂ ಭವಾನಿ ರೇವಣ್ಣ ಅವರು ಕ್ಷೇತ್ರದಲ್ಲಿ ಕೊಂಚ ವಿಶ್ರಾಂತಿ ತೆಗೆದುಕೊಂಡಂತೆ ಕಂಡು ಬಂದಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ತಮ್ಮ ನಿಲುವು ಅಚಲವೆನ್ನುತ್ತಲೇ ಸಾಮಾನ್ಯ ಕಾರ್ಯಕರ್ತನೇ ನಮ್ಮ ಅಭ್ಯರ್ಥಿ, ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಪುನರುಚ್ಚರಿಸಿದ್ದು ಮತ್ತೊಮ್ಮೆ ರೇವಣ್ಣ ಆಂಡ್ ಫ್ಯಾಮಿಲಿ ಸ್ಪರ್ಧೆಗೆ ಅವಕಾಶವಿಲ್ಲವೆಂದಿದ್ದರು.
ಈ ಎಲ್ಲ ಚರ್ಚೆ, ವಿವಾದಗಳನ್ನು ಅಳೆದು ತೂಗಿ ಅಂತಿಮವಾಗಿ ಮಂಗಳವಾರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೊಂದಿಗೆ ಚರ್ಚಿಸಿರುವ ಮಾಜಿ ಸಚಿವ ರೇವಣ್ಣಾ ಅವರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ್ರ ಹೆಸರನ್ನು ಪ್ರಸ್ತಾಪಿಸಿದ್ದು ರಾಜೇಗೌಡರ ಹೆಸರಿಗೆ ಮಾಜಿ ಪ್ರಧಾನಿ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ರಾಜೇಗೌಡರ ಹೆಸರಿಗೆ ರೇವಣ್ಣ ಅಂಡ್ ಫ್ಯಾಮಿಲಿ ಅರ್ಥಾತ್ ಭವಾನಿ ರೇವಣ್ಣ, ಸೂರಜ್, ಪ್ರಜ್ವಲ್ ಎಲ್ಲರೂ ಒಮ್ಮತದ ಸಹಮತ ಸೂಚಿಸಿದ್ದಾರೆನ್ನಲಾಗಿದ್ದು, ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಸಹ ಹಾಸನ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ತೀರ್ಮಾನವೇ ಅಂತಿಮ ಎನ್ನುವ ಮೂಲಕ ರಾಜೇಗೌಡರ ಹೆಸರಿಗೆ ತಮ್ಮ ತಕರಾರು ಇಲ್ಲವೆನ್ನುವ ಸಂದೇಶ ನೀಡಿದಂತಿದೆ. ಶೀಘ್ರದಲ್ಲಿಯೇ ಎಲ್ಲಾ ಆಕಾಂಕ್ಷಿಗಳನ್ನು ಒಟ್ಟಿಗೆ ಸೇರಿಸಿ ರಾಜೇಗೌಡರ ಹೆಸರು ಪ್ರಕಟಿಸಲು ದೇವೇಗೌಡರು ಸೂಚಿಸಿದ್ದಾರೆನ್ನಲಾಗಿದೆ.
ದೊಡ್ಡವರ ಸೂಚನೆ ಸಿಕ್ಕ ಬಳಿಕ ಟೆಂಪಲ್ ರನ್ ಆರಂಭಿಸಿದ ಕೆ.ಎಂ.ರಾಜೇಗೌಡ್ರು
ಇತ್ತ ದೇವೇಗೌಡರ ಸೂಚನೆ ದೊರೆತ ಬಳಿಕ ಕೆ.ಎಂ.ರಾಜೇಗೌಡರು ಹಾಸನದ ನೀರುಬಾಗಿಲು ಆಂಜನೇಯ ದೇವಸ್ಥಾನ, ಹಾಸನಾಂಬ ಸಿದ್ದೇಶ್ವರ ದೇವಸ್ಥಾನ, ಪುರದಮ್ಮ ದೇವಸ್ಥಾನ, ಬೈಲಹಳ್ಳಿ ಲಕ್ಷ್ಮಿ ನರಸಿಂಹ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಸಾತ್ವಿಕ ಸ್ಬಭಾವದ ಕೆ.ಎಂ.ರಾಜೇಗೌಡರಿಗೆ ಹಾಸನ ವಿಧಾನಸಭಾ ಕ್ಷೆತ್ರದಲ್ಲಿ ಜೆಡಿಎಸ್ ದೊರೆತರೆ ಗೆಲುವಿನ ಹಾದಿ ಸುಲಭ ಸಾಧ್ಯವೆನ್ನುವ ಲೆಕ್ಕಾಚಾರಗಳು ಜೆಡಿಎಸ್‌ನೊಳಗೆ ಕೇಳಿ ಬರಲಾರಂಭಿಸಿದ್ದು, ಇದೇ ಅಂತಿಮವಾ? ಅಥವಾ ಮುಂದೆ ಮತ್ತೇನು ಬದಲಾಗುತ್ತದೆಯೋ ಎಂಬ ಚಿಂತೆ ಜೆಡಿಎಸ್ ಕಾರ್ಯಕರ್ತರದ್ದು.