ಹಾಸನ: ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ರಂಗಸ್ವಾಮಿ ( ಬನವಾಸೆ) ಇವರ ಪರ ಮತಯಾಚನೆ ಮಾಡಲು ಮಹಿಳಾ ಕಾಂಗ್ರೆಸ್‌ನಿಂದ ನಗರದ ಬಿ.ಎಂ ರಸ್ತೆ ಬಳಿ ಇರುವ ಶ್ರೀ ಉಡುಸಲಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಚಾಲನೆ ನೀಡಲಾಯಿತು.
ನಂತರ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರ ಚಂದನ್ ಅವರು, ಮೇ 10ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯ ಪ್ರಚಾರಕ್ಕೆ ಮಹಿಳೆಯರು ಉಡುಸಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬನವಾಸೆ ರಂಗಸ್ವಾಮಿ ಅವರಿಗೆ ಶುಭವಾಗಲಿ ಎಂದು ಗ್ರಾಮ ದೇವತೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ತೆರಳುತ್ತಿದ್ದೇವೆ ಎಂದರು.
ನಮ್ಮ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಪಕ್ಷದ ಆಯೋಜಕರಾದ ಪೂಜರವರು ಚುನಾವಣೆ ಮುಗಿಯುವವರೆಗೂ ನಮ್ಮ ಜೊತೆ ಇದ್ದು, ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ. ಮೊದಲ ದಿವಸ ನಾಲ್ಕು ವಾರ್ಡ್‌ಗಳಲ್ಲಿ ಸಂಚರಿಸಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಮಹಿಳಾ ಶಕ್ತಿ ಸಮಾಜದಲ್ಲಿ ತನ್ನದೆಯಾದ ಶಕ್ತಿ ಹೊಂದಿದೆ. ಮಹಿಳೆಯರಿಂದ ದೇವರಿಗೆ ಪೂಜೆ ಸಲ್ಲಿಸಿ, ನಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಾರ್ಥನೆ ಮಾಡಲಾಗಿದೆ. ಒಂದು ಮಹಿಳೆ ಕೂಗು ದೆಹಲಿವರೆಗೂ ಕೇಳಿಸಬೇಕು. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಪ್ರಣಾಳಿಕೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಹಾಸನ ಕ್ಷೇತ್ರದ ಅಭ್ಯರ್ಥಿ ಬಿ.ಕೆ. ರಂಗಸ್ವಾಮಿ (ಬನವಾಸೆ) ಮಾಧ್ಯಮದೊಂದಿಗೆ ಮಾತನಾಡಿ, ರಾಷ್ಟ್ರೀಯ ವೀಕ್ಷಕರಾದಂತಹ ಪೂಜಾ ಅವರ ಅಧ್ಯಕ್ಷತೆಯಲ್ಲಿ ಮತ್ತು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ತಾರ ಚಂದನ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾದ ದೇವರಾಜೇಗೌಡರ ನೇತೃತ್ವದಲ್ಲಿ ಪ್ರಚಾರವನ್ನು ಆರಂಭ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಸನ ನಗರದ 35 ವಾರ್ಡ್‌ಗಳ ಮನೆ ಮನೆಗೆ ತೆರಳಿ ಪಕ್ಷದ ಉದ್ದೇಶಗಳನ್ನು ತಿಳಿಸಿ, ನಮ್ಮ ಅಭ್ಯರ್ಥಿ ಬಿ.ಕೆ. ರಂಗಸ್ವಾಮಿ ಪರ ಮತಯಾಚನೆ ಮಾಡಲಾಗುವುದು. ಭ್ರಷ್ಟಾಚಾರದಲ್ಲಿ ಬಿಜೆಪಿ ಸರಕಾರವು ತೊಡಗಿದೆ ಎಂದು ಆರೋಪಿಸಿದರು.