ಹಾಸನ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ನಗರದ ಕುವೆಂಪು ನಗರ, ಆಡುವಳ್ಳಿ, ಶಂಕರಿಪುರಂ, ಉದಯಗಿರಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮತ ಪ್ರಚಾರ ನಡೆಸಿದರು.
ನಗರದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸ್ವರೂಪ್ ಪ್ರಚಾರ ಆರಂಭಿಸಿದರು, ಈ ವೇಳೆ ಪುಟ್ಟ ಬಾಲಕಿ ಕನಸು ತಾನು ಸಂಗ್ರಹಿಸಿದ್ದ ಹಣವನ್ನು ದೇಣಿಗೆಯಾಗಿ ನೀಡಿದರು ಹಾಗೂ ವೃದ್ಧೆ ಒಬ್ಬರು ಸ್ವರೂಪ್ ಅವರಿಗೆ ದೇಣಿಗೆ ಸಂಗ್ರಹಕ್ಕೆ ಸಹಾಯ ಮಾಡಿದರು. ಈ ವೇಳೆ ಮಾತನಾಡಿದ ಅಭ್ಯರ್ಥಿ ಸ್ವರೂಪ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಅವರ ಆಶೀರ್ವಾದದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದು, ಹಾಸನ ವಿಧಾನಸಭಾ ಕ್ಷೇತ್ರದ ಜನರ ಆಶೀರ್ವಾದದೊಂದಿಗೆ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದೇನೆ ಎಂದರು.
ಹಾಸನದಲ್ಲಿ ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ ತಂದೆ ಪ್ರಕಾಶ್ ಅವರು ಪಕ್ಷಕ್ಕೆ ಹಾಗೂ ಜನರಿಗೆ ನಿಷ್ಠಾವಂತರಾಗಿ ಕೆಲಸ ಮಾಡಿದರು, ಅವರ ಮೇಲಿನ ಅಭಿಮಾನಕ್ಕೆ ನನಗೂ ಈ ಬಾರಿ ಜನರು ಬೆಂಬಲಿಸಲಿದ್ದಾರೆ. ಕ್ಷೇತ್ರದ ಜನರು ಹಣಕ್ಕೆ ಬೆಲೆ ಕೊಡದೆ ಸ್ವಾಭಿಮಾನಿಗಳಾಗಿದ್ದು. ದೇಣಿಗೆ ನೀಡುವ ಮೂಲಕ ನನಗೆ ಚುನಾವಣೆಯಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದರು.
ನೆನ್ನೆ ಸಹ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರೂ ಪದಾಧಿಕಾರಿಗಳು ತಾವು ಸಾರ್ವಜನಿಕರಿಂದ ಸಂಗ್ರಹಿಸಿದ್ದ ದೇಣಿಗೆಯನ್ನು ನನಗೆ ನೀಡಿದ್ದಾರೆ. ಗ್ರಾಮೀಣ ಭಾಗವಾದ ಕಾಟಿಹಳ್ಳಿ, ನಿಡುಡಿ, ಚಿಟ್ಟಳ್ಳಿ ರೈತರು ಸಹ ಒಂದು-ಎರಡು ಸಾವಿರ ರೂ.ಗಳನ್ನು ನೀಡುವ ಮೂಲಕ ಚುನಾವಣಾ ವೆಚ್ಚಕ್ಕೆ ಸಹಾಯ ಮಾಡಿದ್ದಾರೆ. ಪುಟಾಣಿ ಮಕ್ಕಳು ಸಹ ಧನಸಹಾಯ ಮಾಡುತ್ತಿದ್ದು, ಅವರ ಸಹಾಯಕ್ಕೆ ಚಿರಋಣಿಯಾಗಿದ್ದೇನೆ. ಮುಂದೆಯೂ ಸಹ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಯಾವುದೇ ಸಂದರ್ಭದಲ್ಲಿಯೂ ಅವರ ಜೊತೆಗಿರುವುದಾಗಿ ಭರವಸೆ ನೀಡುತ್ತೇನೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಯಾರೂ ಕೂಡ ಒಂದೆರಡು ದಿನದ ಹಣದ ಆಸೆ, ಆಮಿಷಕ್ಕೆ ಒಳಗಾಗದೆ ಮತದಾನ ಮಾಡಬೇಕು ಎಂದು ಕರೆ ನೀಡಿದರು. ಮುಖಂಡರಾದ ಕಮಲ್ ಕುಮಾರ್ ಅವರು ಮಾತನಾಡಿ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಹಣ ಬಲ ಹಾಗೂ ಜನಬಲದೊಂದಿಗೆ ನಡೆಯುತ್ತಿದ್ದು, ಸ್ವರೂಪ್ ಅವರನ್ನು ಜನರು ಆಯ್ಕೆಮಾಡುವ ನಿಟ್ಟಿನಲ್ಲಿ ಇಂದು ಸ್ವಯಂಪ್ರೇರಿತರಾಗಿ ತನು ಮನ ಧನವನ್ನು ಅರ್ಪಿಸುತ್ತಿದ್ದಾರೆ. ಜನಪರ ಹೋರಾಟಕ್ಕೆ ಗೆಲುವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಜೆಡಿಎಸ್ ಮುಖಂಡರಾದ ವಾಸುದೇವ, ಜೆಡಿಎಸ್ ಪಕ್ಷದ ವಕ್ತಾರ ಹೊಂಗೇರಿ ರಘು ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು.