ಹಾಸನ: ಎಲ್ಲಾ ವರ್ಗದ ಜನರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿದ್ದು, ದ್ವೇಷ ರಾಜಕೀಯ ಮರೆತು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಸ್ವರೂಪ್ ಪ್ರಕಾಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿರಿಯರಾದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಎಚ್ ಡಿ ರೇವಣ್ಣ, ಭವಾನಿ ರೇವಣ್ಣ ಅವರು ಸೇರಿದಂತೆ, ಸಂಸದರಾದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ಜಿಲ್ಲೆಯ ಎಲ್ಲಾ ಮುಖಂಡರ ಸಲಹೆ ಸಹಕಾರದಿಂದ ಚುನಾವಣೆಯಲ್ಲಿ ಗೆಲುವು ಪಡೆಯಲು ಸಹಕಾರಿಯಾಯಿತು. ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮಾಜಿ ಶಾಸಕರಾದ ಪ್ರೀತಮ್ ಗೌಡ ಅವರು ಯಾವುದೋ ಒಂದು ವರ್ಗದ ವಿರುದ್ಧ ಮಾತನಾಡಿದ್ದು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರದೇ ಆದ ಹಕ್ಕಿದ್ದು, ಯಾರ ಹೆದರಿಕೆ ಬೆದರಿಕೆಗೂ ಹೆದರುವ ಪ್ರಶ್ನೆಯೇ ಇಲ್ಲ …!? ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುವುದಾಗಿ ಸ್ವರೂಪ್ ಭರವಸೆ ನೀಡಿದರು.
ನಗರದ ಕೆಲ ವಾರ್ಡ್‌ಗಳಲ್ಲಿ ಚುನಾವಣೆ ಫಲಿತಾಂಶ ಬಳಿಕ ಕಸ ವಿಲೇವಾರಿ ಮಾಡುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಇದಕ್ಕೆ ಕೆಲ ಸಂಘ ಸಂಸ್ಥೆಗಳು ತಡೆಯೊಡ್ಡಿದ್ದು ಇನ್ನೆರಡು ದಿನದಲ್ಲಿ ನಗರಸಭೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ಸ್ವರೂಪ್ ಭರವಸೆ ನೀಡಿದರು.
ಈ ಬಾರಿ 85,000 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿ ನನ್ನನ್ನು ಗೆಲ್ಲಿಸಿದ್ದು, ಜೆಡಿಎಸ್ ಪಕ್ಷಕ್ಕೆ ಕಳೆದ ಬಾರಿಗಿಂತ ಸಾವಿರಾರು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಮುಂದಿನ ದಿನಗಳಲ್ಲಿ ಜನರ ಸಲಹೆ ಸೂಚನೆಯನ್ನು ಪಡೆದು ಅಭಿವೃದ್ಧಿ ಕಾರ್ಯದ ಕಡೆ ಗಮನ ಹರಿಸುವುದಾಗಿ ಹೇಳಿದ ಅವರು ಫುಡ್ ಪಾರ್ಕ್ ತೆರವು ಮಾಡುವ ವಿಚಾರವಾಗಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಶಾಸಕರು ಮುಂದಿನ ಚುನಾವಣೆಗಳಿಗೆ ರಣಕಹಳೆ ಊದುವ ವಿಚಾರವಾಗಿ ಮಾತನಾಡಿದ್ದು ಅಂತಹ ಪದ ಬಳಕೆ ಬೇಡ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಾಸುದೇವ್, ರಘು ಹೊಂಗೆರೆ, ಸ್ವಾಮಿಗೌಡ , ನವೀನ್, ಆರಿಫ್ ಇದ್ದರು.
ಸಂಭ್ರಮ ಶಾಂತಿಯುತವಾಗಿರಲಿ
ಕ್ಷೇತ್ರದ ಮತದಾರರಲ್ಲಿ ಹಾಗೂ ಕಾರ್ಯಕರ್ತರಲ್ಲಿ ವಿನಂತಿಸುತ್ತಿದ್ದು, ಯಾವುದೇ ಪ್ರಚೋದನೆಯ ಹೇಳಿಕೆಗೆ ಕಿವಿಗೊಡದೆ, ಚುನಾವಣೆ ಮುಗಿದಿದ್ದು ಗೆಲುವಿನ ಸಂಭ್ರಮಾಚರಣೆ ಶಾಂತಿಯುತವಾಗಿ ಮಾಡಬೇಕು ಎಂದು ಕರೆ ನೀಡಿದರು.