ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಕೊನೆಗೂ ಸ್ವರೂಪ್‌ಗೆ ಸಿಕ್ಕಿದೆ. ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಭವಾನಿ ರೇವಣ್ಣಗೆ ಟಿಕೆಟ್ ತಪ್ಪಿದೆ. ಸ್ವರೂಪ್ ಮತ್ತು ಭವಾನಿ ರೇವಣ್ಣ ಮಧ್ಯೆ ಟಿಕೆಟ್‌ಗಾಗಿ ಭಾರೀ ಸ್ಪರ್ಧೆ ನಡೆದಿತ್ತು. ಭವಾನಿ ರೇವಣ್ಣ ಈ ಬಾರಿ ನಾನೇ ಹಾಸನದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದರು.
ಇತ್ತ ಇನ್ನೊಂದು ಕಡೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ವರೂಪ್ ಪರ ಬ್ಯಾಟ್ ಬೀಸಿದ್ದರು. ಎಚ್.ಡಿ. ರೇವಣ್ಣ ಅವರು ಪತ್ನಿಯ ಪರವಾಗಿ ಮಾತನಾಡಿದ್ದರು. ಕಳೆದ ಎರಡು ತಿಂಗಳಿನಿಂದ ಭವಾನಿ ವರ್ಸಸ್ ಸ್ವರೂಪ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಎಚ್‌ಡಿ ರೇವಣ್ಣ ಅವರು ಹಾಸನ ಟಿಕೆಟ್ ಯಾರಿಗೆ ಸಿಗಬೇಕು ಎನ್ನುವುದರ ಬಗ್ಗೆ ದೇವೇಗೌಡರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ ಅಂತಿಮವಾಗಿ ಹಾಸನ ಟಿಕೆಟ್ ಅನ್ನು ಸ್ವರೂಪ್ ಪಡೆದುಕೊಂಡಿದ್ದು, ಭವಾನಿ ರೇವಣ್ಣಗೆ ಭಾರೀ ಹಿನ್ನಡೆಯಾಗಿದೆ. ಇದರ ಬೆನ್ನಲ್ಲೇ ಹಾಸನದ ಹೆಚ್.ಪಿ ಸ್ವರೂಪ್ ನಿವಾಸದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಬೆಂಬಲಿಗರು ಸ್ವರೂಪ್‌ರನ್ನು ಹೆಗಲ ಮೇಲೆ ಹೊತ್ತು ಕುಣಿದು ಸಂಭ್ರಮಿಸಿದರು.
ಇನ್ನೂ ಹಾಸನ ಟಿಕೆಟ್‌ಗೆ ಸಂಬಂಧಿಸಿ ಜಾತ್ಯತೀತ ಜನತಾದಳದಲ್ಲಿ ಕುಟುಂಬವೇ ಒಡೆದು ಹೋಗುವ ಅಪಾಯಕಾರಿ ಸನ್ನಿವೇಶವೂ ನಿರ್ಮಾಣವಾಗಿತ್ತು. ಯಾವ ಕಾರಣಕ್ಕೂ ಹಾಸನ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಭವಾನಿ ರೇವಣ್ಣ ಹಠ ತೊಟ್ಟಿದ್ದರು. ಎಚ್.ಡಿ ರೇವಣ್ಣ ಅವರ ಬೆಂಬಲವೂ ಅವರಿಗಿತ್ತು. ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತಂ ಗೌಡ ಅವರ ಸವಾಲನ್ನು ಎದುರಿಸಲು ಸ್ವತಃ ಭವಾನಿ ರೇವಣ್ಣ ಅವರೇ ಮುಂದಾಗಿದ್ದರು. ಆದರೆ, ಇದು ಕೌಟುಂಬಿಕ ರಾಜಕಾರಣಕ್ಕೆ ಇಂಬು ನೀಡಿದಂತಾಗುತ್ತದೆ. ನಾವು ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕಾಗುತ್ತದೆ ಎಂಬ ಕಾರಣವಿಟ್ಟುಕೊಂಡು ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಅಂತಿಮವಾಗಿ ವಿವಾದ ದೇವೇಗೌಡರ ಅಂಗಳ ತಲುಪಿತ್ತು. ದೇವೇಗೌಡರು ಕೂಡಾ ಕುಮಾರಸ್ವಾಮಿ ಅವರದೇ ಮಾತಿಗೆ ಮಣೆ ಹಾಕಿದಾಗ ಒಂದು ಹಂತದಲ್ಲಿ ಭವಾನಿ ರೇವಣ್ಣ ಸಿಟ್ಟಿಗೆದ್ದಿದ್ದರು. ಹಾಸನದಲ್ಲಿ ಜೆಡಿಎಸ್ ಟಿಕೆಟ್ ನೀಡದೆ ಹೋದರೆ ಪಕ್ಷೇತರರಾಗಿ ಕಣಕ್ಕಿಳಿಯುವ ಬೆದರಿಕೆಯನ್ನೂ ಹಾಕಲಾಗಿತ್ತು. ಆದರೆ, ಕುಮಾರಸ್ವಾಮಿ ಯಾವ ಬ್ಲ್ಯಾಕ್ ಮೇಲ್‌ಗೂ ತಲೆ ಬಾಗುವುದಿಲ್ಲ ಎಂದು ತಮ್ಮ ನಿಲುವಿಗೆ ಕಟ್ಟು ಬಿದ್ದಿದ್ದರು. ಒಂದು ಹಂತದಲ್ಲಿ ಭವಾನಿ ರೇವಣ್ಣ ಅವರಿಗೆ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಟಿಕೆಟ್ ನೀಡುವ ಚರ್ಚೆಯೂ ನಡೆದಿತ್ತು ಎನ್ನಲಾಗಿದೆ. ಆದರೆ, ಇದನ್ನು ರೇವಣ್ಣ ಅವರೇ ತಿರಸ್ಕರಿಸಿದ್ದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸ್ವರೂಪ್ ಅವರು, ನಮ್ಮ ತಂದೆಯವರು ಆರು ಬಾರಿ ಹಾಸನ ಕ್ಷೇತ್ರದಲ್ಲಿ ಸ್ಪರ್ದೆ ಮಾಡಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಕಳೆದ ಬಾರಿ ವ್ಯತ್ಯಾಸಗಳು ನಮ್ಮಲ್ಲಿಯೂ ಕೂಡ ಆಗಿದೆ. ಎಲ್ಲಾರನ್ನು ಒಗ್ಗಟ್ಟಿನಿಂದ ಕೊಂಡೊಯ್ದು ಈ ಚುನಾವಣೆಯನ್ನು ಎದುರಿಸಲಾಗುವುದು. ಜೆಡಿಎಸ್ ಪಕ್ಷದಿಂದ ಟಿಕೆಟ್ ಘೋಷಣೆ ಮಾಡಿರುವುದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ, ಭವಾನಿ ರೇವಣ್ಣ ಎಲ್ಲಾರಿಗೂ ನಾನು ಚಿರಋಣಿ ಆಗಿರುತ್ತೇನೆ. ಟಿಕೆಟನ್ನು ಪಕ್ಷದಲ್ಲಿ ಯಾರಿಗೆ ಕೊಟ್ಟಿದ್ದರೂ ಕೂಡ ಪ್ರಮಾಣಿಕವಾಗಿ ಪ್ರಚಾರ ಮಾಡುತ್ತಿರುವುದಾಗಿ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಎಂದರು.