ಹಾಸನ: ಹೊಳೆನರಸೀಪುರ ಅನ್ನೋ ಮಹಾನ್ ಜಿದ್ದಾ-ಜಿದ್ದಿ ಕ್ಷೇತ್ರದಲ್ಲಿ ಹೆಚ್.ಡಿ ರೇವಣ್ಣರ ವಿರುದ್ದ ಸ್ಪರ್ಧೆಗೆ ಇಳಿಯೋ ಕಾಂಗ್ರೆಸ್ ಅಭ್ಯರ್ಥಿಗಳು ಬಲಿಕಾ ಬಕ್ರಾಗಳೇ..? ಇಲ್ಲಿ ಗೆಲುವು ಅಭಾದಿತ ಅನ್ನೋ ಶಾಶ್ವತ ನಿಲುವು ಹೊಂದಿರೋ ರೇವಣ್ಣ ವಿರುದ್ದ ಕಾಂಗ್ರೆಸ್‌ನ ಘಟಾನುಘಟಿಗಳು ಮುದುರಿ ಕುಳಿತು ಬಿಡುತ್ತಾರಾ..? ತನ್ನ ಎದುರಾಳಿ ವಿರುದ್ದ ಪ್ರಚಾರಕ್ಕೆ ಬರುವವರಿಗೆ ತಡೆಯೊಡ್ಡುವ ರೇವಣ್ಣರ ಮಾಂತ್ರಿಕ ಶಕ್ತಿಗೆ ಅವರೆಲ್ಲಾ ನಡುಗಿ ಹೋಗ್ತಿದ್ದಾರಾ..? ಹೀಗಿನ್ನೋ ಹತ್ತು ಹಲವು ಪ್ರಶ್ನೆಗಳು ಹೊಳೆನರಸೀಪುರ ಕ್ಷೇತ್ರದಲ್ಲಿ ಹರಿದಾಡ್ತಾ ಇದೆ.
ಇದರ ಜೊತೆ ಜೊತೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬದ ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತರಾಗಿದ್ದ ಜಿ. ಪುಟ್ಟಸ್ವಾಮಿ ಗೌಡರ ಹೆಸರು ಕೂಡ ಅಲ್ಲಲ್ಲಿ ಪ್ರತಿಧ್ವನಿಸುತ್ತಿರೋದು ಸಧ್ಯದ ವಿಶೇಷ. ಪುಟ್ಟಸ್ವಾಮಿಗೌಡರ ನಂತರ ಜೆಡಿಎಸ್ ವಿರುದ್ದ ತೊಡೆ ತಟ್ಟಿ ಗೆಲ್ಲೋ ಮತ್ತೋರ್ವ ಗಂಡು ಇಲ್ಲಿ ಬರಲಿಲ್ಲ ಅನ್ನೋದೇ ಇದಕ್ಕೆ ಕಾರಣ. ಅದೆಂತಹ ರಣಪಟ್ಟುಗಳಿದ್ದರೂ ಲೀಲಾಜಾಲವಾಗಿ ಜಯಿಸಬಲ್ಲ ಹೆಚ್.ಡಿ ರೇವಣ್ಣರಿಗೆ ಗೆಲುವು ಅನ್ನೋದು ಬಾಳೆಹಣ್ಣು ಸುಲಿದಷ್ಟು ಸಲೀಸು.
ಸದ್ಯಕ್ಕೆ ಅವರ ವಿರುದ್ದ ರಾಜಕೀಯದ ಜಿದ್ದು ಸಾಧಿಸಿ ಗೆದ್ದು ಬರುವವರು ಯಾರೂ ಇಲ್ಲಾ ಅಂದ್ರೆ ಖಂಡಿತ ತಪ್ಪಾಗಲಾರದು. ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹೊರತು ಪಡಿಸಿದರೆ ಬಿಜೆಪಿ ಸೇರಿದಂತೆ ಇತರ ಪಕ್ಷಗಳ ಪ್ರಾಬಲ್ಯ ಅಷ್ಟಕಷ್ಟೇ. ಕ್ಷೇತ್ರ ಮರುವಿಂಗಡನೆ ನಂತರ ತನ್ನ ಶಕ್ತಿಯನ್ನ ದುಪ್ಪಟ್ಟು ಮಾಡಿ ಕೊಂಡಿರುವ ಹೆಚ್. ಡಿ ರೇವಣ್ಣರ ವಿರುದ್ದ ನಿಂತು ಇಲ್ಲಿ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ. ಇವೆಲ್ಲದರ ನಡುವೆ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್ ಮಾತ್ರ ತನ್ನ ಉಮೇದುವಾರಿಕೆಯನ್ನ ಸಲ್ಲಿಸುತ್ತಲೇ ಬಂದಿದೆ. ಹಿಂದಿನ ಚುನಾವಣೆಗಳಲ್ಲಿ ಅನುಕಂಪದ ಅಲೆ ಗಿಟ್ಟಿಸಿಕೊಳ್ಳಲು ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾರನ್ನ ಕಣಕ್ಕಿಳಿಸಿದ್ದರೂ ಯಶಸ್ಸು ಸಾಧ್ಯವಾಗಲಿಲ್ಲ. ಆನಂತರ ಬಾಗೂರು ಮಂಜೇಗೌಡರ ಶಕ್ತಿ ವಿನಿಯೋಗಿಸೋ ಪ್ರಯತ್ನದಲ್ಲೂ ಕೂಡ ಸೋಲಾಯಿತು.
ಈಗ ಅದೇ ಪುಟ್ಟಸ್ವಾಮಿ ಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ. ಈಗಲೂ ಸಹ ಬೆಂಬಲಕ್ಕೆ ನಿಲ್ಲಬೇಕಿದ್ದ ಕಾಂಗ್ರೆಸ್ ಧುರೀಣರು ಮಾತ್ರ ಇತ್ತ ತಲೆ ಹಾಕುತ್ತಿಲ್ಲಾ. ಭರವಸೆಯ ಭಯಂಕರ ಎಂದು ಮಾತನಾಡಿದ್ದ ಮಾಜಿ ಸಿ.ಎಂ ಸಿದ್ದರಾಮಯ್ಯ, ಡಿ.ಕೆ ಬ್ರದರ್ಸ್ ಸೇರಿದಂತೆ ಯಾರೂ ಕೂಡ ಇತ್ತ ಸುಳಿಯದೇ ಇರುವುದು ಮತದಾರರ ಹುಬ್ಬೇರುವಂತೆ ಮಾಡಿದೆ. ಕಾಂಗ್ರೆಸ್ ನಾಯಕರ ಈ ಮೌನ ಜೆಡಿಎಸ್ ಪಾಳಯದಲ್ಲಿ ಗೆಲುವಿನ ನಗೆ ಬೀರುವಂತೆ ಮಾಡಿರುವುದಂತೂ ಸುಳ್ಳಲ್ಲಾ.