ಹಾಸನ: ಹಾಸನದ ಹೊಳೆನರಸಿಪುರದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಟಕ್ಕರ್ ಕೊಟ್ಟ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪ್ರತಿಕ್ರಿಯೆ ನೀಡಿದ್ದು, ಸಂವಿಧಾನದಡಿ ಇಂದು ರೇವಣ್ಣ ಶಾಸಕರಾಗಿರಬಹುದು. ಆದರೆ ಹೊಳೆನರಸೀಪುರದ ಬಡ ಜನಕ್ಕೆ ನಾನೇ ಶಾಸಕ. 50 ಸಾವಿರ ಮತಗಳ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದಿದ್ದರು ಸಾಧ್ಯವಾಗಿಲ್ಲ. 2028ರ ಚುನಾವಣೆಗೆ ನಾನು ನಾಳೆಯಿಂದಲೇ ಸಿದ್ಧನಾಗ್ತೇನೆ. ಜನತೆ ಜೊತೆ ಇದ್ದು ಕಷ್ಟ ಸುಖಕ್ಕೆ ಸ್ಪಂದಿಸುತ್ತೇನೆ. ನಾನು ಸೋತಿರಬಹುದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಡವರಿಗೆ ಏನು ತಲುಪಬೇಕೋ ಅದನ್ನ ತಲುಪಿಸುತ್ತೇನೆ ಎಂದು ಶ್ರೇಯಸ್ ಪಟೇಲ್ ಹೇಳಿದ್ದಾರೆ.
ರಾಜ್ಯದ ಜನ ನೋಡುವಂತೆ ಹೊಳೆನರಸೀಪುರದ ಜನ ನನಗೆ ಮತ ನೀಡಿದ್ದಾರೆ. ಹಣದ ಹೊಳೆ ಹರಿಸಿ ಹೆಂಡದ ಆಸೆ ತೋರಿಸಿದರೂ ಜನ ನಮಗೆ ಮತ ನೀಡಿದ್ದಾರೆ. ಅವರು ಹಣದಿಂದ ಗೆದ್ದಿದ್ದಾರೆ ಹೊರತು ಪ್ರೀತಿ-ವಿಶ್ವಾಸ, ಅಭಿವೃದ್ಧಿಯಿಂದ ಗೆದ್ದಿಲ್ಲ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಅಧಿಕಾರಕ್ಕೆ ತರುತ್ತೇವೆ. ನಾನು ಸೋತಿದ್ದೇನೆ ಎಂದು ಕುಗ್ಗುವುದಿಲ್ಲ, ಬೇಜಾರು ಇಲ್ಲ. ನಮ್ಮ ತಾಲೂಕಿನ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಮುಂದೆಯಾದ್ರು ಸರಿಯಾದ ರೀತಿಯಲ್ಲಿ ಕೆಲಸ ಮಾಡಿ. ನಾನು ಸೋತು ಗೆದ್ದಿದ್ದೇನೆ, ರೇವಣ್ಣ ಗೆದ್ದು ಸೋತಿದ್ದಾರೆ ಎಂದು ಶ್ರೇಯಸ್ ಲೇವಡಿ ಮಾಡಿದ್ದಾರೆ.