ಹಾಸನ: ಈ ಬಾರಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಅವರನ್ನು ಗೆಲ್ಲಿಸಲು ಎಲ್ಲಾ ಸಮುದಾಯ ಮುಂದಾಗಿದ್ದು ಅವರ ಗೆಲುವು ಗ್ಯಾರಂಟಿ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಭರವಸೆ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಶಾಸಕ ದಿವಂಗತ ಎಚ್.ಎಸ್ ಪ್ರಕಾಶ್ ಅವರು 15 ವರ್ಷ ಶಾಸಕರಾಗಿ ಹಾಸನದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲು ಸ್ವರೂಪ್ ಗೆಲ್ಲಬೇಕು ಎಂದು ಹೇಳಿದರು.
ಹಾಸನಕ್ಕೆ ಜೆಡಿಎಸ್ ಕೊಡುಗೆ ಅಪಾರವಿದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಅಧಿಕಾರಿ ಅವಧಿಯಲ್ಲಿ ಜಿಲ್ಲೆಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಅಗತ್ಯ ಅಭಿವೃದ್ಧಿ ಯೋಜನೆ ಒದಗಿಸಲಾಗಿದೆ ಎಂದರು.
ಕುಮಾರಸ್ವಾಮಿ ಹಾಗೂ ದೇವೇಗೌಡರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಕ್ರಾಂತಿಕಾರ ಬೆಳವಣಿಗೆ ಆಗಿದೆ. ನೂರಾರು ಕಾಲೇಜು ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಜೆಡಿಎಸ್ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ. ಈ ಮೂಲಕ ಪ್ರತಿವರ್ಷ 10 ಸಾವಿರ ಪದವಿ ವಿದ್ಯಾರ್ಥಿಗಳು ಹೊರಬರುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಶಿಕ್ಷಣ ಕ್ಷೇತ್ರವನ್ನು ಕೇವಲ ವ್ಯಾಪಾರೀಕರಣಕ್ಕೆ ಬಳಸಿಕೊಂಡಿದ್ದಾರೆ, ನಾವು ಯಾವುದೇ ಶಿಕ್ಷಣ ಸಂಸ್ಥೆಗಳ ಮಾಲಿಕತ್ವ ಹೊಂದಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅನುದಾನ ಕುಮಾರಸ್ವಾಮಿ ಅವಧಿಯಲ್ಲಿ ಬಿಡುಗಡೆಯಾಗಿದೆ. ಆದರೆ ಇಂದು ಹಾಸನ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಯಲ್ಲಿ ಲೂಟಿ ನಡೆದಿದ್ದು, ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಎಂಜಿನಿಯರ್ ಹಾಗೂ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯನಿಂದ ಶಾಸಕನಾಗಿ ಮಾಡುವವರೆಗೆ 15 ವರ್ಷ ಗಿಣಿಯಂತೆ ಸಾಕಿದೆ, ಆದರೆ ನಮಗೆ ಮೋಸ ಮಾಡಿ ಬೇರೆ ಪಕ್ಷ ಸೇರಿದರು ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ವಿರುದ್ಧ ಅಸಮಾಧಾನ ತೋಡಿಕೊಂಡ ರೇವಣ್ಣ ಅವರು ನೈತಿಕತೆ ಇದ್ದರೆ ಕಾಂಗ್ರೆಸ್ ಪಕ್ಷ ಹೊರತಾಗಿ ನಿಂತು ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದರು.
ಅರಸೀಕೆರೆ ಕ್ಷೇತ್ರದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಮುಖ ನೋಡಿ ಮತ ಹಾಕುವುದಿಲ್ಲ ಎಂದು ಹೇಳಿ ಎರಡು ವರ್ಷ ದೇವೇಗೌಡರ ಮನೆಗೆ ಅಲೆದು ಕಾಲ ಕಳೆದು ನಂತರ ಕಾಂಗ್ರೆಸ್ ಸೇರಿದ ಶಿವಲಿಂಗೇಗೌಡರು ನಂಬಿಕೆ ದ್ರೋಹ ಮಾಡಿದರು ಎಂದು ರೇವಣ್ಣ ಕಿಡಿಕಾರಿದರು. ನಾರ್ವೆ ಸೋಮಶೇಖರ್ ಜೆಡಿಎಸ್ ಪಕ್ಷ ಸೇರಲಿದ್ದು, ಪಕ್ಷದ ಪರವಾಗಿ ಮುಂದೆ ಕೆಲಸ ಮಾಡಲಿದ್ದಾರೆ. ಅವರಿಗೆ ಮುಂದೆ ಪಕ್ಷದಿಂದ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದರು.