ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಪರ ಇಂದು ಮಾಜಿ ಸಚಿವ ಎಚ್. ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಅಧಿಕೃತವಾಗಿ ಪ್ರಚಾರ ಆರಂಭಿಸಿದರು.
ನಗರದ ನೀರು ಬಾಗಿಲು ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ವಿಶೇಷವಾಗಿ ನಿರ್ಮಾಣ ಮಾಡಲಾಗಿರುವ ಜೆಡಿಎಸ್ ಪಕ್ಷದ ವಾಹನದಲ್ಲಿ ಪ್ರಚಾರ ಆರಂಭಿಸಿದ ಅಭ್ಯರ್ಥಿ ಸ್ವರೂಪ್ ಅವರಿಗೆ ಭವಾನಿ ರೇವಣ್ಣ, ಎಚ್. ಡಿ. ರೇವಣ್ಣ, ಕೆ.ಎಂ ರಾಜೇಗೌಡ, ಸಿ.ಆರ್ ಶಂಕರ್, ಅಕ್ಬರ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್ ದ್ಯಾವೇಗೌಡ, ಲೊಕೇಶ್ ಅಟ್ಟಾವರ, ವಕೀಲ ಯೋಗೀಶ್ ಸೇರಿದಂತೆ ಇತರ ನಾಯಕರು ಸಾಥ್ ನೀಡಿದರು.
ರ್‍ಯಾಲಿ ವೇಳೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಭವಾನಿ ರೇವಣ್ಣ ಅವರು ಹಾಸನ ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ನೂರಾರು ಕೋಟಿಗಳ ವೆಚ್ಚದಲ್ಲಿ ಇಂಜಿನಿಯರಿಂಗ್ ಕಾಲೇಜು, ಡಿಪ್ಲೋಮಾ ಕಾಲೇಜು, ಸರ್ಕಾರಿ ಮಕ್ಕಳ ಆಸ್ಪತ್ರೆ, ಹೈಟೆಕ್ ಆಸ್ಪತ್ರೆ ಸೇರಿದಂತೆ ಹಲವು ಯೋಜನೆಗಳನ್ನು ನೀಡಿದ ಕೀರ್ತಿ ಜೆಡಿಎಸ್ ಆಡಳಿತದಲ್ಲಿ ಸಲ್ಲುತ್ತದೆ ಎಂದರು.
ಬಿಜೆಪಿ ಆಡಳಿತದಂತೆ ನಗರದಲ್ಲಿ ಮಳೆ-ಗಾಳಿಗೆ ಬೀಳುವಂತಹ ತಗಡಿನ ಕಾಮಗಾರಿಗಳನ್ನು ಜೆಡಿಎಸ್ ಅಧಿಕಾರವಧಿಯಲ್ಲಿ ಮಾಡಿಲ್ಲ. ಹಾಸನ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ವರೂಪ್ ಪ್ರಕಾಶ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಆಂಜನೇಯ ದೇವಾಲಯದಿಂದ ಆರಂಭಗೊಂಡ ರ್‍ಯಾಲಿಯು ಎನ್.ಆರ್ ವೃತ್ತದ ಮೂಲಕ ಸಂಚರಿಸಿ ಹೇಮಾವತಿ ಪ್ರತಿಮೆ ನಂತರ ಆರ್‌ಸಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸ್ವರೂಪ್ ಪರ ಮತಯಾಚನೆ ಮಾಡಲಾಯಿತು.